ನವದೆಹಲಿ: ಗೊಂಡಾದಲ್ಲಿ ಗುರುವಾರ ಚಂಡೀಗಢ-ದಿಬ್ರೂಗಢ ಎಕ್ಸಪ್ರೆಸ್ ರೈಲು ಹಳಿತಪ್ಪಿದ ಪ್ರಕರಣದ ಬಗ್ಗೆ ತನಿಖೆ ನಡೆಸಿದ ಹಿರಿಯ ರೈಲ್ವೆ ಅಧಿಕಾರಿಗಳ ತಂಡವು, 'ರೈಲು ಹಳಿಯನ್ನು ಸರಿಯಾಗಿ ಜೋಡಿಸದಿರುವುದೇ ಅಪಘಾತಕ್ಕೆ ಕಾರಣ' ಎಂದು ತಿಳಿಸಿದೆ.
'ರೈಲು ಹಳಿಯಲ್ಲಿನ ಸಮಸ್ಯೆಯಿಂದಾಗಿ ಅಪಘಾತ ನಡೆದಿದೆ' ಎಂದು 5 ಅಧಿಕಾರಿಗಳನ್ನೊಳಗೊಂಡ ತನಿಖಾ ತಂಡವು ತಿಳಿಸಿದೆ.
'ತನಿಖಾ ಸಮಿತಿಯ ವರದಿಯ ಆಧಾರದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವುದು ಸರಿಯಲ್ಲ' ಎಂದು ಈಶಾನ್ಯ ರೈಲ್ವೆ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.
'ರೈಲ್ವೆ ಸುರಕ್ಷತಾ ವಿಭಾಗದ ತನಿಖೆಯು ಆರಂಭವಾಗಿದ್ದು, ಶುಕ್ರವಾರ ಮೊದಲ ವಿಚಾರಣೆ ನಡೆದಿದೆ. ತಾಂತ್ರಿಕ ವಿಚಾರಗಳೊಂದಿಗೆ ಸಮಗ್ರ ತನಿಖೆ ನಡೆಯಲಿದೆ. ಸಮಿತಿಯ ತನಿಖೆಯಲ್ಲಿ ನಿರ್ಣಾಯಕ ಅಂಶಗಳು ಬೆಳಕಿಗೆ ಬಂದಿಲ್ಲ. ಆದ್ದರಿಂದ ಇದು ಸಕಾಲಿಕವಲ್ಲ' ಎಂದು ಹೇಳಿದ್ದಾರೆ.
ಉತ್ತರಪ್ರದೇಶದ ಗೊಂಡಾ ಜಿಲ್ಲೆಯ ಮೋತಿಗಂಜ್ ಮತ್ತು ಝಿಲಾಹಿ ರೈಲು ನಿಲ್ದಾಣಗಳ ಮಧ್ಯೆ ಚಂಡೀಗಢ-ದಿಬ್ರೂಗಢ ಎಕ್ಸಪ್ರೆಸ್ ರೈಲು ಗುರುವಾರ ಹಳಿ ತಪ್ಪಿತ್ತು. ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು.
'ರೈಲು ಹಳಿಯಲ್ಲಿ ಸಮಸ್ಯೆಯಿರುವ ಬಗ್ಗೆ ಮಧ್ಯಾಹ್ನ 1:30ರ ವೇಳೆಗ ಹಿರಿಯ ವಿಭಾಗಿಯ ಎಂಜಿನಿಯರ್‌ಗೆ ಮಾಹಿತಿ ಸಿಕ್ಕಿದೆ. ಆದರೆ, ರೈಲಿನ ವೇಗವನ್ನು ತಗ್ಗಿಸುವ ಬಗ್ಗೆ 2:30ರ ವೇಳೆಗೆ ಮೋತಿಗಂಜ್‌ನ ಸ್ಟೇಷನ್ ಮಾಸ್ಟರ್‌ಗೆ ಸೂಚನೆ ನೀಡಲಾಗಿದೆ. 2:31ರ ವೇಳೆಗಾಗಲೇ ರೈಲು ಹಳಿ ತಪ್ಪಿತ್ತು. ಸೂಕ್ತ ಸಮಯಕ್ಕೆ ಮಾಹಿತಿ ನೀಡದ ಎಂಜಿನಿಯರ್ ವಿಭಾಗವೇ ಅಪಘಾತಕ್ಕೆ ಹೊಣೆ' ಎಂದು ತನಿಖಾ ತಂಡ ತಿಳಿಸಿದೆ.
ತನಿಖಾ ತಂಡದ ಆರೋಪಗಳನ್ನು ಎಂಜಿನಿಯರ್ ವಿಭಾಗದ ಹಿರಿಯ ಅಧಿಕಾರಿಗಳು ತಳ್ಳಿ ಹಾಕಿದ್ದು, 'ರೈಲು ಹಳಿಯಲ್ಲಿನ ಸಮಸ್ಯೆಗಳು ಅಪಘಾತಕ್ಕೆ ಕಾರಣವಲ್ಲ, ಲೋಕೊ ಪೈಲಟ್ ಅಸಮರ್ಪಕವಾಗಿ ಬ್ರೇಕ್ ಹಾಕಿದ ಕಾರಣ ಅಪಘಾತ ನಡೆದಿದೆ' ಎಂದು ತಿಳಿಸಿದ್ದಾರೆ.