ಅಹಮದಾಬಾದ್: ಗುಜರಾತ್‌ನಲ್ಲಿ ಮಂಗಳವಾರ ಶಂಕಿತ ಚಂಡಿಪುರ ವೈರಸ್ ಸೋಂಕಿನಿಂದ ಮತ್ತೆ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಚಂಡಿಪುರ ವೈರಸ್‌ಗೆ ಬಲಿಯಾದ ಮಕ್ಕಳ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಚಂಡಿಪುರ ವೈರಸ್ ಸೋಂಕಿತರ ಸಂಖ್ಯೆ 14ಕ್ಕೆ ಏರಿದೆ ಮತ್ತು ಅವರಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದಾರೆ ಎಂದು ಗುಜರಾತ್ ಆರೋಗ್ಯ ಸಚಿವ ರುಶಿಕೇಶ್ ಪಟೇಲ್ ಅವರು ಹೇಳಿದ್ದಾರೆ.
ರಾಜ್ಯ ರಾಜಧಾನಿ ಗಾಂಧಿನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವರು, ಸಬರಕಾಂತ, ಅರಾವಳಿ, ಮಹಿಸಾಗರ್, ಖೇಡಾ, ಮೆಹ್ಸಾನಾ ಮತ್ತು ರಾಜ್‌ಕೋಟ್ ಜಿಲ್ಲೆಗಳಲ್ಲಿ ಚಂಡಿಪುರ ಪ್ರಕರಣಗಳು ವರದಿಯಾಗಿವೆ ಎಂದು ತಿಳಿಸಿದರು.
ರಾಜ್ಯ ಆರೋಗ್ಯ ಇಲಾಖೆಯು ಚಂಡಿಪುರ ವೈರಸ್ ಪೀಡಿತ ಜಿಲ್ಲೆಗಳಲ್ಲಿ ತೀವ್ರ ನಿಗಾ ವಹಿಸಿದೆ ಮತ್ತು ರೋಗಲಕ್ಷಣಗಳನ್ನು ಹೊಂದಿರುವ ಶಂಕಿತ ಪ್ರಕರಣಗಳನ್ನು ಚಂಡಿಪುರ ವೈರಸ್ ಪ್ರಕರಣಗಳೆಂದು ಪರಿಗಣಿಸಲು ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಜಿಲ್ಲಾ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳಿಗೆ ವಿಶೇಷ ಸಲಹೆ ನೀಡಲಾಗಿದೆ ಎಂದು ಪಟೇಲ್ ಹೇಳಿದರು.
ಈ ರೋಗದಲ್ಲಿ ಮರಣ ಪ್ರಮಾಣ ಹೆಚ್ಚಾಗಿದ್ದು, ಚಿಕಿತ್ಸೆ ಪಡೆಯಲು ವಿಳಂಬವಾದಲ್ಲಿ ರೋಗಿ ಬದುಕುವುದು ಕಷ್ಟಕರವಾಗಿದೆ. ಹೀಗಾಗಿ
ಮುನ್ನೆಚ್ಚರಿಕೆ ಕ್ರಮವಾಗಿ 26 ವಸತಿ ವಲಯಗಳ 8,600 ಮನೆಗಳಲ್ಲಿ 44,000 ಕ್ಕೂ ಹೆಚ್ಚು ಜನರ ತಪಾಸಣೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.
ಚಂಡಿಪುರ ವೈರಸ್ ವೆಸಿಕ್ಯುಲೋವೈರಸ್‌ನಿಂದ ಉಂಟಾಗುತ್ತದೆ. ಮುಖ್ಯವಾಗಿ ಮರಳು ನೊಣಗಳ ಕಡಿತದಿಂದ ಮನುಷ್ಯರಿಗೆ ಹರಡುತ್ತದೆ. ಈ ವೈರಸ್ ನೊಣಗಳು, ಸೊಳ್ಳೆಗಳು ಮತ್ತು ಕೀಟಗಳ ಮೂಲಕ ಹರಡುತ್ತದೆ.