ಮುಂಬೈ: ಟಿ-20 ವಿಶ್ವಕಪ್ ಗೆದ್ದ ಭಾರತೀಯ ಕ್ರಿಕೆಟ್ ತಂಡಕ್ಕೆ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ಸನ್ಮಾನ ಸಮಾರಂಭ ನಡೆಯಲಿದೆ. ಅದಕ್ಕೂ ಮುನ್ನ ತೆರದ ಬಸ್‌ನಲ್ಲಿ ರೋಡ್ ಶೊ ನಡೆಯಲಿದೆ.
AIC24WC (Air India Champions 24 World Cup) ಎನ್ನುವ ಕಾಲ್ ಸೈನ್ ಇರುವ ವಿಶೇಷ ವಿಮಾನದಲ್ಲಿ ಬಾರ್ಬಾಡೋಸ್ ಗ್ರಾಂಟ್ಲಿ ಆಡಮ್ಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿರುವ ಆಟಗಾರರು, ಜುಲೈ 4ರ ಬೆಳಿಗ್ಗೆ 6 ಗಂಟೆಗೆ ದೆಹಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುವರು.
ಬಾರ್ಬಾಡೋಸ್‌ನಲ್ಲಿ 'ಬೆರಿಲ್' ಚಂಡಮಾರುತ ಕಾರಣ ತಂಡದ ನಿರ್ಗಮನ ವಿಳಂಬವಾಗಿತ್ತು. ತಂಡದ ಸದಸ್ಯರು ಹಾಗೂ ಅವರು ಕುಟುಂಬ, ಸಹಾಯಕ ಸಿಬ್ಬಂದಿ, ಬೋರ್ಡ್ ಅಧಿಕಾರಿಗಳು ಹಾಗೂ ಭಾರತದ ಪತ್ರಕರ್ತರು, ಸ್ಥಳೀಯ ಕಲಮಾನ ಬೆಳಿಗ್ಗೆ 4.50ಕ್ಕೆ ಹೊರಟಿದ್ದಾರೆ.
'ಬಿಸಿಸಿಐ ವ್ಯವಸ್ಥೆ ಮಾಡಿರುವ ವಿಶೇಷ ವಿಮಾನದಲ್ಲಿ ತಂಡವು ಅಲ್ಲಿಂದ ಹೊರಟಿದೆ. ಅಲ್ಲಿ ಸಿಲುಕಿದ್ದ ಭಾರತದ ಪತ್ರಕರ್ತರೂ ಕೂಡ ಅದೇ ವಿಮಾನದಲ್ಲಿದ್ದಾರೆ. ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಜಯ್ ಶಾ ಕೂಡ ಅದೇ ವಿಮಾನದಲ್ಲಿದ್ದು, ಎಲ್ಲಾ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದಾರೆ' ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ ಶುಕ್ಲಾ ಹೇಳಿದ್ದಾರೆ.
'ಬೆಳಿಗ್ಗೆ 6ಗಂಟೆಗೆ ದೆಹಲಿ ಏರ್‌ಪೋರ್ಟ್‌ಗೆ ವಿಮಾನ ತಲುಪಲಿದೆ. ಬೆಳಿಗ್ಗೆ 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಲಿದೆ. ಬಳಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮುಂಬೈಗೆ ತರಳಲಿದೆ' ಎಂದು ಅವರು ತಿಳಿಸಿದ್ದಾರೆ.
'ಮುಂಬೈನ ನರೀಮನ್ ಪಾಯಿಂಟ್‌ನಿಂದ ತೆರೆದ ಬಸ್‌ನಲ್ಲಿ ರೋಡ್ ಶೊ ನಡೆಯಲಿದೆ. ಬಳಿಕ ಈಗಾಗಲೇ ಬಿಸಿಸಿಐ ಘೋಷಣೆ ಮಾಡಿರುವ ₹125 ಕೋಟಿ ನಗದು ಬಹುಮಾನದ ವಿತರಣೆ ನಡೆಯಲಿದೆ' ಎಂದು ಅವರು ತಿಳಿಸಿದ್ದಾರೆ.
ಗೆಲುವನ್ನು ಸಂಭ್ರಮಿಸುವ ಈ ರೋಡ್ ಶೋನಲ್ಲಿ ಭಾಗವಹಿಸಿ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅಭಿಮಾನಿಗಳನ್ನು ಸ್ವಾಗತಿಸಿದ್ದಾರೆ.