ಟೆಹರಾನ್: ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಅವರಿದ್ದ ಟೆಹರಾನ್ ನಿವಾಸದ ಮೇಲೆ ಇಸ್ರೇಲ್ ದಾಳಿ ನಡೆಸಿದೆ. ಘಟನೆಯಲ್ಲಿ ಇಸ್ಮಾಯಿಲ್ ಹನಿಯೆಹ್ ಮತ್ತು ಅವರ ಅಂಗರಕ್ಷಕ ಮೃತಪಟ್ಟಿದ್ದಾರೆ ಎಂದು ಇರಾನ್ ಸೇನೆ, ಇರಾನ್ ರೆವಲ್ಯೂಷನರಿ ಗಾರ್ಡ್ಸ್ ಖಚಿತಪಡಿಸಿದೆ.

ಇಸ್ಮಾಯಿಲ್ ಹನಿಯೆಹ್ ಅವರು ಇರಾನ್‌ನ ನೂತನ ಅಧ್ಯಕ್ಷ ಡಾ.ಮಸೂದ್ ಪೆಜೆಶ್ಕಿಯಾನ್ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಇಸ್ಮಾಯಿಲ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಹಮಾಸ್, ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದೆ. ಆದರೆ, ಇಸ್ಮಾಯಿಲ್ ನಿಧನದ ಬಗ್ಗೆ ಇಸ್ರೇಲ್ ತಕ್ಷಣಕ್ಕೆ ಯಾವುದೇ ಹೇಳಿಕೆ ನೀಡಿಲ್ಲ.
ಕಳೆದ ಹಲವು ತಿಂಗಳಿನಿಂದ ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವೆ ದಾಳಿ, ಪ್ರತಿದಾಳಿಗಳು ನಡೆಸುತ್ತಿವೆ. ಇಸ್ರೇಲ್ ಕಾರ್ಯಾಚರಣೆಯಲ್ಲಿ ಈವರೆಗೆ ಹಮಾಸ್ ಬಂಡುಕೋರರು, ನಾಗರಿಕರು ಸೇರಿದಂತೆ 39,400ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ.
ಏಪ್ರಿಲ್‌ನಲ್ಲಿ ಗಾಜಾದ ಮೇಲೆ ವಾಯು ದಾಳಿ ನಡೆಸಿರುವ ಇಸ್ರೇಲ್ ಪಡೆಗಳು, ಹಮಾಸ್ ಬಂಡುಕೋರರ ನಾಯಕ ಇಸ್ಮಾಯಿಲ್ ಹನಿಯೆಹ್ ಅವರ ಮೂವರು ಮಕ್ಕಳು, ನಾಲ್ವರು ಮೊಮ್ಮಕ್ಕಳನ್ನು ಹತ್ಯೆ ಮಾಡಿದ್ದವು.
2017ರಲ್ಲಿ ಖಲೀದ್ ಮೆಶಾಲ್ ಅವರ ಉತ್ತರಾಧಿಕಾರಿಯಾಗಿ ಇಸ್ಮಾಯಿಲ್ ಹನಿಯೆಹ್ ಅವರು ಹಮಾಸ್ ರಾಜಕೀಯ ಬ್ಯೂರೊದ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದರು. ಹಮಾಸ್‌ನ ಪ್ರತಿಸ್ಪರ್ಧಿಗಳು ಸೇರಿದಂತೆ ವಿವಿಧ ಪ್ಯಾಲೇಸ್ಟಿನಿಯನ್ ಬಣಗಳ ಮುಖ್ಯಸ್ಥರೊಂದಿಗೆ ಹನಿಯೆಹ್ ಉತ್ತಮ ಸಂಬಂಧ ಹೊಂದಿದ್ದರು ಎಂದು ಹೇಳಲಾಗಿದೆ.