ನವದೆಹಲಿ: ಹಸ್ತಲಾಘವ ಮಾಡುವೆ ವೇಳೆ ಪ್ರಧಾನಿ ನರೇಂದ್ರ ಮೋದಿಯವರಿಗೆ ತಲೆ ಬಾಗಿಸಿದ್ದನ್ನು ಪ್ರಶ್ನಿಸಿದ ಲೋಕಸಭೆ ವಿರೋಧ ಪಕ್ಷದ ನಾಯಕ ಹಾಗೂ ಸ್ಪೀಕರ್ ಓಂ ಬಿರ್ಲಾ ನಡುವೆ ಮಾತಿನ ಚಕಮಕಿ ನಡೆಯಿತು.
ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯ ವೇಳೆ ಈ ಘಟನೆ ನಡೆಯಿತು.
18ನೇ ಲೋಕಸಭೆಗೆ ಸ್ಪೀಕರ್ ಚುನಾವಣೆ ಆದ ಬಳಿಕ, ತಾವು ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ಸೇರಿ ಸ್ಪೀಕರ್ ಅವರನ್ನು ಪೀಠದ ಬಳಿ ಕರೆದುಕೊಂಡು ಹೋಗಿದ್ದನ್ನು ರಾಹುಲ್ ಪ್ರಸ್ತಾಪಿಸಿದರು.
'ಲೋಕಸಭೆಯಲ್ಲಿ ನಿಮ್ಮ ಮಾತೇ ಅಂತಿಮ. ನಿಮ್ಮ ಹೇಳಿಕೆಗಳು ಭಾರತದ ಪ್ರಜಾಪ್ರಭುತ್ವವನ್ನು ಮೂಲಭೂತವಾಗಿ ವ್ಯಾಖ್ಯಾನಿಸುತ್ತದೆ. ಆ ಕುರ್ಚಿಯಲ್ಲಿ ಇಬ್ಬರು ಕುಳಿತಿದ್ದಾರೆ. ಒಂದು ಲೋಕಸಭೆಯ ಸ್ಪೀಕರ್ ಮತ್ತೊಂದು ಓಂ ಬಿರ್ಲಾ...' ಎಂದು ಹೇಳಿದ್ದಾರೆ.
'ನಾನು ಏನನ್ನೋ ಗಮನಿಸಿದೆ. ನಾನು ಹಸ್ತಲಾಘವ ಮಾಡುವ ವೇಳೆ ನೀವು ನೆಟ್ಟಗೆ ನಿಂತಿದ್ದೀರಿ. ಮೋದಿಯವರು ಹಸ್ತಲಾಘವ ಮಾಡುವಾಗ ನೀವು ತಲೆ ಭಾಗಿಸಿದಿರಿ' ಎಂದಿದ್ದಾರೆ.
ಈ ವೇಳೆ ಆಡಳಿತ ಪಕ್ಷದ ಸದಸ್ಯರು ನಿಂತು ಗದ್ದಲ ಮಾಡಿದರು. 'ಪೀಠದ ಮೇಲೆ ಆರೋಪ ಮಾಡುತ್ತಿದ್ದೀರಿ' ಎಂದು ಗೃಹ ಸಚಿವ ಅಮಿತ್ ಶಾ ಆಕ್ಷೇಪ ವ್ಯಕ್ತಪಡಿಸಿದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಸ್ಪೀಕರ್, 'ಹಿರಿಯರಿಗೆ ತಲೆಬಾಗುವ ಸಂಪ್ರದಾಯವನ್ನು ಪಾಲಿಸಿದ್ದೇನೆ' ಎಂದರು.
'ಪ್ರಧಾನಿ ಅವರು ಸಭಾನಾಯಕರು. ವೈಯಕ್ತಿಕ ಹಾಗೂ ಸಾರ್ವಜನಿಕ ಜೀವನದಲ್ಲಿ ಮತ್ತು ಈ ಆಸನದಲ್ಲಿ ನಾನು ಹಿರಿಯರಿಗೆ ನಮಸ್ಕರಿಸುತ್ತೇನೆ. ಸಮಾನರಾದವರನ್ನು ಸಮಾನವಾಗಿ ಕಾಣಬೇಕು ಎಂದು ನನ್ನ ಸಂಸ್ಕೃತಿ ಮತ್ತು ಸಂಪ್ರದಾಯಗಳು ಕಲಿಸಿವೆ' ಎಂದು ಸ್ಪೀಕರ್ ಹೇಳಿದರು.
ನಾನು ಅದನ್ನು ಈ ಪೀಠದಿಂದ ಹೇಳುತ್ತೇನೆ. ಹಿರಿಯರಿಗೆ ನಮಸ್ಕರಿಸುತ್ತೇನೆ. ಅಗತ್ಯವಿದ್ದರೆ ಅವರ ಪಾದಗಳನ್ನು ಮುಟ್ಟುವುದು ನನ್ನ ಸಂಸ್ಕೃತಿ' ಎಂದು ಬಿರ್ಲಾ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, 'ಸಭಾಧ್ಯಕ್ಷರು ಹೇಳಿದ್ದನ್ನು ತಾನು ಗೌರವಿಸುತ್ತೇನೆ. ಈ ಸದನದಲ್ಲಿ ಸ್ಪೀಕರ್‌ಗಿಂತ ಯಾರೂ ದೊಡ್ಡವರಲ್ಲ. ಎಲ್ಲರೂ ಅವರಿಗೆ ತಲೆಬಾಗಬೇಕು. ನಾನು ನಿಮಗೆ ನಮಸ್ಕರಿಸುತ್ತೇನೆ. ಇಡೀ ಪ್ರತಿಪಕ್ಷವೂ ನಿಮಗೆ ತಲೆ ಭಾಗುತ್ತದೆ' ಎಂದು ಹೇಳಿದರು.
'ಲೋಕಸಭೆಯ ಸದಸ್ಯರಾಗಿ ನಾವು ಸ್ಪೀಕರ್‌ಗೆ ಅಧೀನರಾಗಿದ್ದೇವೆ. ನೀವು ಹೇಳುವುದನ್ನು ನಾವು ಕೇಳುತ್ತೇವೆ. ಆದರೆ ಸದನದಲ್ಲಿ ನ್ಯಾಯಯುತವಾಗಿರುವುದು ಮುಖ್ಯ' ಎಂದು ಹೇಳಿದರು.