ಮಂಜೇಶ್ವರ: ಹೊಸಂಗಡಿ ರಾಷ್ಟ್ರೀಯ ಹೆದ್ದಾರಿ ಓವರ್ ಪಾಸ್ ಬಳಿ ನಿರ್ಮಿಸಲಾದ ಸರ್ವೀಸ್ ರಸ್ತೆ ಮೊದಲ ಮಳೆಗೆ ಕುಸಿದಿದಿದೆ. ಕೋಟ್ಯಾಂತರ ರೂಪಾಯಿಯ ಅನುದಾನದೊಂದಿಗೆ ಯು.ಎಲ್.ಸಿ.ಸಿ. ಕಂಪನಿ ಗುತ್ತಿಗೆ ಪಡೆದು ರಸ್ತೆಕಾಮಗಾರಿ ಪೂರ್ಣಗೊಂಡು ವಾಹನ ಸಂಚಾರಕ್ಕೆ ಬಿಟ್ಟು ಕೊಟ್ಟ ರಸ್ತೆಯ ಲೋಪದೋಷವನ್ನು ಒಂದೇ ವರ್ಷದ ಮೊದಲ ಮಳೆ ಬಯಲು ಮಾಡಿದೆ.
ಇದೀಗ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಭೀತಿ ಎದುರಾಗಿದೆ. ರಾಷ್ಟ್ರೀಯ ಹೆದ್ದಾರಿ ಷಟ್ಪಥ ರಸ್ತೆ ಹಾಗೂ ಸರ್ವೀಸ್ ರಸ್ತೆಯ ಕಾಮಗಾರಿ ಇತ್ತೀಚೆಗಷ್ಟೇ ಪೂರ್ಣಗೊಂಡ ಬಳಿಕ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಡಲಾಗಿತ್ತು. ಮೊದಲ ಮಳೆಗೆ ರಸ್ತೆ ಕುಸಿಯುವುದರ ಜೊತೆಗೆ ರಸ್ತೆಗೆ ಅಡ್ಡಲಾಗಿ ನಿರ್ಮಿಸಲಾದ ಬ್ಯಾರಿಕೇಡ್ ಕೂಡಾ ಬಿರುಕು ಬಿಟ್ಟಿರುವುದು ಸಾರ್ವಜನಿಕ ವಲಯದಲ್ಲಿ ಯು ಎಲ್ ಸಿ ಸಿ ಕಂಪೆನಿಯ ವಿರುದ್ಧ ಭಾರೀ ಸಂಶಯಕ್ಕೂ ಕಾರಣವಾಗಿದೆ.
ಭಾರೀ ಮೊತ್ತದ ಅನುದಾನ ಪಡೆದು ಮೇಲ್ನೋಟಕ್ಕೆ ಮಾತ್ರ ಅತ್ಯಾಕರ್ಷಕವಾಗಿ ಕಾಣುವಂತೆ ರಸ್ತೆ ನಿರ್ಮಿಸಿ ಕಳಪೆ ಕಾಮಗಾರಿ ನಡೆಸಿ ಜನರ ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆಯಾಗದಂತೆ ಸುಭದ್ರ ರಸ್ತೆಗಳನ್ನು ನಿರ್ಮಾಣ ಮಾಡುವ ಬದಲಿಗೆ ಭಾರೀ ಅನುದಾನ ಪಡೆದು ಒಂದೇ ಮಳೆಗೆ ಅದರ ಅಸಲಿ ಬಣ್ಣ ಬಯಲಾಗುವುದಾದರೆ ಇಂತಹ ಕಾಮಗಾರಿ ಏಕೆ ಬೇಕಿತ್ತು ಎಂದು ಇಲ್ಲಿಯ ಜನತೆ ಈ ರಸ್ತೆಯ ಅವ್ಯವಸ್ಥೆಯನ್ನು ನೋಡಿ ಪ್ರಶ್ನಿಸಿದ್ದಾರೆ.
ಮಳೆಗಾಲಕ್ಕೆ ಮುಂಚೆಯೇ ಈ ರಸ್ತೆ ಅಲ್ಪ ಬಿರುಕು ಬಿಟ್ಟಿದ್ದು ಗಮನಿಸಿ ಜನರು ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಯಾರೂ ಇತ್ತ ತಿರುಗಿಯೂ ನೋಡಿಲ್ಲವಂದು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಆರೋಪಿಸಿದೆ.
ಸ್ಥಳಕ್ಕೆ ಹೋರಾಟ ಸಮಿತಿ ಪದಾಧಿಕಾರಿಗಳಾದ ಅಬ್ದುಲ್ ಜಬ್ಬಾರ್ ಬಹರೈನ್, ಹಸೈನಾರ್, ಅಲಿ ಕುಟ್ಟಿ, ಅಶ್ರಫ್ ಬಡಾಜೆ, ಸಂಜೀವ ಶೆಟ್ಟಿ, ಬಶೀರ್ ಕನಿಲ ಹಾಗೂ ಕುಂಞ ಮೋನು ಬೇಟಿ ನೀಡಿ ಸ್ಥಿತಿಗತಿಗಳನ್ನು ಪರಿಶೀಲಿಸಿ ಕೂಡಲೇ ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಇದಕ್ಕೊಂದು ಪರಿಹಾರ ಕಾಣಬೇಕು ಇಲ್ಲವಾದರೆ ಗುತ್ತಿಗೆ ಪಡೆದು ಕಾಮಗಾರಿ ನಡೆಸಿದ ಯು ಎಲ್ ಸಿ ಸಿ ಕಂಪನಿ ಕಚೇರಿ ಮುಂಬಾಗದಲ್ಲಿ ಪ್ರತಿಭಟನೆ ನಡೆಸಲಿರುವುದಾಗಿ ಎಚ್ಚರಿಕೆ ನೀಡಿದ್ದಾರೆ.