HEALTH TIPS

ಹಾಥರಸ್‌ನಲ್ಲಿ ಕಾಲ್ತುಳಿತ ಪ್ರಕರಣ: ಮುಖ್ಯ ಆರೋಪಿ ಪೊಲೀಸರಿಗೆ ಶರಣು

          ನೋಯ್ಡಾ: ಹಾಥರಸ್‌ನಲ್ಲಿ ನಡೆದಿದ್ದ ಕಾಲ್ತುಳಿತ ಅವಘಡದ ಮುಖ್ಯ ಆರೋಪಿ ದೇವ್‌ಪ್ರಕಾಶ್‌ ಮಧುಕರ್ ಶುಕ್ರವಾರ ರಾತ್ರಿ ದೆಹಲಿಯಲ್ಲಿ ಪೊಲೀಸರಿಗೆ ಶರಣಾಗಿದ್ದಾನೆ.

           ಉತ್ತರ ಪ್ರದೇಶದ ಹಾಥರಸ್‌ ಜಿಲ್ಲೆಯಲ್ಲಿ ಜುಲೈ 2ರಂದು ನಡೆದಿದ್ದ ಅವಘಡದಲ್ಲಿ 121 ಜನರು ಮೃತಪಟ್ಟಿದ್ದರು.

            ಮಧುಕರ್ ಆ ದಿನ ಸತ್ಸಂಗ ಕಾರ್ಯಕ್ರಮದ 'ಮುಖ್ಯ ಸೇವಾದಾರ'ನಾಗಿದ್ದನು. ಸಿಕಂದ್ರಾ ರಾವ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದಾಖಲಿಸಿದ್ದ ಎಫ್‌ಐಆರ್‌ನಲ್ಲಿಯೂ ಈತನೊಬ್ಬನ ಹೆಸರನ್ನೇ ಉಲ್ಲೇಖಿಸಲಾಗಿತ್ತು.

            ಮಧುಕರ್‌ ಪರ ವಕೀಲ ಎ.ಪಿ.ಸಿಂಗ್ ಅವರು, 'ನನ್ನ ಕಕ್ಷಿದಾರ ದೆಹಲಿಯಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ. ಅವರಿ ಅಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು' ಎಂದು ವಿಡಿಯೊ ಸಂದೇಶ ನೀಡಿದ್ದಾರೆ.

'ಮುಖ್ಯ ಸೇವಾದಾರನ ಸುಳಿವು ನೀಡಿದವರಿಗೆ ₹1 ಲಕ್ಷ ನಗದು ಬಹುಮಾನ ನೀಡಲಾಗುವುದು' ಎಂದು ಉತ್ತರ ಪ್ರದೇಶ ಸರ್ಕಾರ ಪ್ರಕಟಿಸಿತ್ತು.

               ಕೃತ್ಯದ ಸಂಬಂಧ ಈವರೆಗೆ ಇಬ್ಬರು ಮಹಿಳೆಯರು ಸೇರಿ ಆರು ಜನರನ್ನು ಬಂಧಿಸಲಾಗಿದೆ. ಇವರು, ಸೂರಜ್‌ಪಾಲ್ ಅಲಿಯಾಸ್ ನಾರಾಯಣ ಸಾಕರ್ ಹರಿ ಅಲಿಯಾಸ್ ಭೋಲೆ ಬಾಬಾನ ಸತ್ಸಂಗ ಆಯೋಜನೆ ಸಮಿತಿ ಸದಸ್ಯರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

          ಹಾಥರಸ್ ವರದಿ (ಉತ್ತರ ಪ್ರದೇಶ): ಈ ಮಧ್ಯೆ, ಉತ್ತರಪ್ರದೇಶ ರಾಜ್ಯ ಪೊಲೀಸರು ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳು, 'ಭೋಲೆ ಬಾಬಾ'ನ ಪತ್ತೆಗಾಗಿಯೂ ಜಾಲ ಬೀಸಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

            'ತನಿಖಾ ತಂಡಗಳು ರಾಜ್ಯದ ಹಲವು ಜಿಲ್ಲೆಗಳಿಗೆ ಭೇಟಿ ನೀಡಿವೆ' ಎಂದು ತಿಳಿಸಿದ್ದಾರೆ.

'ಸತ್ಸಂಗ' ಕಾರ್ಯಕ್ರಮದ 'ಮುಖ್ಯ ಸೇವಾದಾರ' ಮಧುಕರ್‌ ಜೊತೆಗೆ 'ಹಲವು ಅಪರಿಚಿತ ಸಂಘಟಕರ' ವಿರುದ್ಧವೂ ಸಿಕಂದ್ರಾ ರಾವ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

                 ವರದಿ ಸಲ್ಲಿಕೆ: ಕಾಲ್ತುಳಿತ ಕುರಿತಂತೆ ವಿಶೇಷ ತನಿಖಾ ತಂಡದ (ಎಸ್‌ಐಟಿ) ಪ್ರಾಥಮಿಕ ವರದಿ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎಡಿಜಿಪಿ (ಆಗ್ರಾ ವಲಯ) ಅನುಪಮ್ ಕುಲಶ್ರೇಷ್ಠ ಸೇರಿದಂತೆ ಹಿರಿಯ ಅಧಿಕಾರಿಗಳಿಗೂ ಈ ವರದಿ ಸಲ್ಲಿಸಲಾಗಿದೆ. ಹಾಥರಸ್‌ ಜಿಲ್ಲಾಧಿಕಾರಿ ಆಶಿಶ್‌ ಕುಮಾರ್‌, ಎಸ್ಪಿ ನಿಪುಣ್ ಅಗರವಾಲ್‌, ಆರೋಗ್ಯ ಇಲಾಖೆ ಅಧಿಕಾರಿಗಳ ಹೇಳಿಕೆಗಳನ್ನು ಈ ವರದಿ ಒಳಗೊಂಡಿದೆ ಎಂದು ತಿಳಿಸಿದ್ದಾರೆ.

'90ಕ್ಕೂ ಹೆಚ್ಚು ಹೇಳಿಕೆಗಳ ದಾಖಲು': ಕಾಲ್ತುಳಿತ ಘಟನೆಗೆ ಸಂಬಂಧಿಸಿ ವಿಶೇಷ ತನಿಖಾ ತಂಡವು
(ಎಸ್‌ಐಟಿ) 90ಕ್ಕೂ ಹೆಚ್ಚು ಹೇಳಿಕೆಗಳನ್ನು ದಾಖಲಿಸಿದೆ ಎಂದು ಶುಕ್ರವಾರ ತಂಡದ ಮುಖ್ಯಸ್ಥ ಎಡಿಜಿಪಿ (ಆಗ್ರಾ ವಲಯ) ಅನುಪಮ್‌ ಕುಲಶ್ರೇಷ್ಠ ತಿಳಿಸಿದರು.

'ಹೆಚ್ಚಿನ ಪರಿಹಾರಕ್ಕೆ ಯತ್ನ'

                 ಹಾಥರಸ್/ಅಲಿಗಢ: 'ನಮಗೆ ನೀಡಲಾಗುವ ಪರಿಹಾರ ಮೊತ್ತವನ್ನು ಹೆಚ್ಚಳ ಮಾಡುವುದಕ್ಕೆ ಪ್ರಯತ್ನಿಸುವುದಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭರವಸೆ ನೀಡಿದ್ದಾರೆ' ಎಂದು ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಸ್ಥರು ಶುಕ್ರವಾರ ಹೇಳಿದ್ದಾರೆ.

             ಕಾಲ್ತುಳಿತ ಕುರಿತು ಸಂಸತ್‌ ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ಹಾಗೂ ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಲು ಒತ್ತಾಯಿಸುವುದಾಗಿಯೂ ರಾಹುಲ್‌ ಗಾಂಧಿ ತಿಳಿಸಿದ್ದಾಗಿ ಹೇಳಿದ್ದಾರೆ.

              ರಾಹುಲ್‌ ಗಾಂಧಿ ಅವರು ಅಲಿಗಢ ಬಳಿಯ ಪಿಲ್ಖನಾ ಗ್ರಾಮ ಹಾಗೂ ಹಾಥರಸ್‌ನ ವಿಭವ ನಗರಕ್ಕೆ ಭೇಟಿ ನೀಡಿ, ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳ ಸದಸ್ಯರಿಗೆ ಸಾಂತ್ವನ ಹೇಳಿದರು.

'ರಾಹುಲ್‌ ಗಾಂಧಿ ನಮ್ಮ ಜೊತೆ ಮಾತನಾಡಿ, ಸಾಂತ್ವನ ಹೇಳಿದರು. ಪರಿಹಾರ ಮೊತ್ತ ಹೆಚ್ಚಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು' ಎಂದು ಕಾಲ್ತುಳಿತದಲ್ಲಿ ತನ್ನ ಸೋದರತ್ತೆಯನ್ನು ಕಳೆದು ಕೊಂಡಿರುವ ಹಾಥರಸ್‌ ನಿವಾಸಿ ಹರಿಮೋಹನ್‌ ಹೇಳಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries