ಮಂಗಳೂರು: ಕಳೆದ ಕೆಲವು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನೇತ್ರಾವತಿ ಮತ್ತು ಕುಮಾರಧಾರ ನದಿಗಳು ಉಕ್ಕಿ ಹರಿಯುತ್ತಿವೆ.
ಗುರುವಾರ ಬೆಳಗ್ಗೆ ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಇದರಿಂದಾಗಿ ಜಿಲ್ಲಾಡಳಿತವು ಪಾಣೆಮಂಗಳೂರು ಮತ್ತು ಇತರ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ.
ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ 100.09 ಮಿ.ಮೀ ಮಳೆಯಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ 134.8 ಮಿ.ಮೀ ಮಳೆಯಾಗಿದ್ದು, ಕಡಬ ತಾಲೂಕಿನಲ್ಲಿ 104.1 ಮಿ.ಮೀ ಮಳೆಯಾಗಿದೆ. ಬೆಳ್ತಂಗಡಿ ತಾಲೂಕಿನ ಲಾಯಿಲ, ಮಲೆಂತಬೆಟ್ಟು, ಬಳಂಜ, ಕಲ್ಮಂಜ, ಪಟ್ರಮೆ, ಮುಂಡಾಜೆ, ಮಲವಂತಿಗೆ, ಉಜಿರೆ, ಅರಸಿನಮಕ್ಕಿಯಲ್ಲಿ 139 ಮಿ.ಮೀ.ಗೂ ಹೆಚ್ಚು ಮಳೆಯಾಗಿದೆ.
ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ 433 ಮಿ.ಮೀ ಮಳೆಯಾಗಿದ್ದು, ವಾಡಿಕೆ ಮಳೆಗಿಂತ 289 ಮಿ.ಮೀ. ಹೆಚ್ಚು ಮಳೆಯಾಗಿದ್ದು,
ಭಾರಿ ಮಳೆಗೆ ಮಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ನೀರು ಪೂರೈಸುವ ಬಂಟ್ವಾಳ ತಾಲೂಕಿನ ಎಎಂಆರ್ ಅಣೆಕಟ್ಟು ಮತ್ತು ತುಂಬೆ ಅಣೆಕಟ್ಟು ಕೂಡ ಭರ್ತಿಯಾಗಿವೆ. ಇದರಿಂದಾಗಿ ತುಂಬೆ ಅಣೆಕಟ್ಟಿನ 30 ಗೇಟ್‌ಗಳನ್ನು ತೆರೆಯಲಾಗಿದೆ.
ಭಾರಿ ಮಳೆಯಿಂದಾಗಿ ಜಿಲ್ಲೆಯಲ್ಲಿ ಬುಧವಾರ ಒಂಬತ್ತು ಮನೆಗಳು ಮತ್ತು 129 ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ.
ನೇತ್ರಾವತಿ ಮತ್ತು ಕುಮಾರಧಾರ ಸಂಗಮವಿರುವ ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ನೀರಿನ ಮಟ್ಟ 20 ಮೀಟರ್‌ಗೆ ಏರಿದೆ. ನೀರಿನ ಮಟ್ಟ 31.5 ಮೀಟರ್‌ಗೆ ಏರಿದ್ದು, ದೇವಾಲಯವು ದ್ವೀಪವಾಗಿ ಬದಲಾಗುತ್ತಿದೆ.
ಪಾಣೆಮಂಗಳೂರು ಸಮೀಪದ ಆಲಡ್ಕದಲ್ಲಿ ಹಲವಾರು ಮನೆಗಳು, ಖಾಸಗಿ ಶಾಲೆಯ ಆಟದ ಮೈದಾನ, ಅಡಿಕೆ, ತೆಂಗಿನ ತೋಟಗಳು ಜಲಾವೃತವಾಗಿವೆ. ಪುತ್ತೂರು ತಾಲೂಕಿನ ಕರ್ನೂರು ಕೋಟಿಗದ್ದೆಯಲ್ಲಿ ಸುಮಾರು 40 ವರ್ಷಗಳಷ್ಟು ಹಳೆಯದಾದ ಸೇತುವೆ ದುರ್ಬಲವಾಗಿರುವುದರಿಂದ ಭಾರಿ ವಾಹನಗಳ ಸಂಚಾರವನ್ನು ಜಿಲ್ಲಾಡಳಿತ ನಿಷೇಧಿಸಿದೆ.
ಮಂಗಳೂರು-ಬೆಂಗಳೂರು ಸಂಚಾರ ಸ್ಥಗಿತ
ಏತನ್ಮಧ್ಯೆ, ಶಿರಾಡಿ ಘಾಟ್‌ನಲ್ಲಿ ಭೂಕುಸಿತ ಸಂಭವಿಸಿದ ನಂತರ ಮಂಗಳೂರು-ಬೆಂಗಳೂರು ಹೆದ್ದಾರಿ(ಎನ್‌ಎಚ್ -75) ಸಂಚಾರವನ್ನು ಮಡಿಕೇರಿ ಮತ್ತು ಮೈಸೂರು ಮೂಲಕ ಬದಲಾಯಿಸಲಾಗಿದೆ.
ಘಾಟ್ ವಿಭಾಗದಲ್ಲಿ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ ಹಲವಾರು ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳು ಹಲವು ಗಂಟೆ ತಡವಾಗಿ ತಮ್ಮ ಗಮ್ಯಸ್ಥಾನವನ್ನು ತಲುಪಿದವು.
ಇನ್ನು ಮಡಿಕೇರಿ ಮತ್ತು ಸಂಪಾಜೆ ನಡುವೆ ಕರ್ತೋಜಿ ಎಂಬಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜುಲೈ 18ರಿಂದ 22ರವರೆಗೆ ರಾತ್ರಿ 8ರಿಂದ ಬೆಳಗ್ಗೆ 6ರವರೆಗೆ ಎನ್‌ಎಚ್-275ರಲ್ಲಿ ರಾತ್ರಿ ಸಂಚಾರ ನಿಷೇಧಿಸಿ ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಆದೇಶ ಹೊರಡಿಸಿದ್ದಾರೆ.
ಆದಾಗ್ಯೂ, ತುರ್ತು ವಾಹನಗಳು ಮತ್ತು ವಿಪತ್ತು ನಿರ್ವಹಣೆಯಲ್ಲಿ ತೊಡಗಿರುವ ಅಧಿಕಾರಿಗಳ ವಾಹನಗಳಿಗೆ ರಾತ್ರಿ ನಿಷೇಧದಿಂದ ವಿನಾಯಿತಿ ನೀಡಲಾಗಿದೆ. ಬೆಂಗಳೂರು ಮತ್ತು ಮೈಸೂರು ಕಡೆಗೆ ತೆರಳುವ ವಾಹನಗಳಿಗೆ ಚಾರ್ಮಾಡಿ ಘಾಟ್ ಮಾರ್ಗವಾಗಿ ತೆರಳುವಂತೆ ಡಿಸಿ ಸೂಚಿಸಿದ್ದಾರೆ.