ಮಂಜೇಶ್ವರ: ವಿದ್ಯಾವರ್ಧಕ ಎಯುಪಿ ಶಾಲೆ ಮೀಯಪದವಿನಲ್ಲಿ ರಕ್ಷಕ ಶಿಕ್ಷಕ ಸಂಘದ ಮಹಾಸಭೆ ಹಾಗೂ ರಕ್ಷಕರಿಗೆ ತಿಳುವಳಿಕಾ ತರಗತಿ ಕಾರ್ಯಕ್ರಮವು ಎಂ ರಾಮಕೃಷ್ಣರಾವ್ ಸಭಾಂಗಣದಲ್ಲಿ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪಿಟಿಎ ಅಧ್ಯಕ್ಷರಾದ ಹಮೀದ್ ಮೈತಾಳ್ ವಹಿಸಿದ್ದರು.ಶಾಲಾ ಆಡಳಿತ ಸಲಹೆಗಾರರಾದ ಶ್ರೀಧರ್ ರಾವ್. ಆರ್ ಎಂ ಶಾಲೆಯ ವ್ಯವಸ್ಥೆಯ ಬಗ್ಗೆ ಹೆತ್ತವರಿಗೆ ತಿಳಿಸಿದರು. ಶಾಲಾ ಮುಖ್ಯೋಪಾಧ್ಯಾಯ ಅರವಿಂದಾಕ್ಷ ಭಂಡಾರಿ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಈ ಸಂದರ್ಭದಲ್ಲಿ ಕಳೆದ ಶೈಕ್ಷಣಿಕ ವರ್ಷ ಎಲ್.ಎಸ್.ಎಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸ್ಕಾಲರ್ಶಿಪ್ ಗೆ ಅರ್ಹತೆಯನ್ನು ಪಡೆದ ವಿದ್ಯಾರ್ಥಿಗಳಾದ ಫಾತಿಮತ್ ಸಿಝ್ಮಾ, ಹರ್ಪಿತಾ ಹಾಗೂ ಹಿಬಾ ಫಾತಿಮಾ ಇವರನ್ನು ಅಭಿನಂದಿಸಲಾಯಿತು.ಮೀಂಜಾ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಹೆತ್ತವರಿಗೆ ತಿಳುವಳಿಕಾ ತರಬೇತಿಯನ್ನು ನಡೆಸಲಾಯಿತು. ಬಳಿಕ ನೂತನ ಪದಾಧಿಕಾರಿಗಳನ್ನು ಹಾಗೂ ಕಾರ್ಯಕಾರಿ ಸಮಿತಿಯನ್ನು ರೂಪಿಕರಿಸಲಾಯಿತು. ನೂತನ ಪಿಟಿಎ ಅಧ್ಯಕ್ಷರಾಗಿ ಸನತ್ ಕುಮಾರ್, ಉಪಾಧ್ಯಕ್ಷರಾಗಿ ಸಿದ್ದಿಕ್ ಹಾಗೂ ಅಶೋಕ್ ,ಎಂ.ಪಿ.ಟಿ.ಎ ಅಧ್ಯಕ್ಷೆಯಾಗಿ ಸ್ವಾತಿ ದೇರಂಬಳ, ಉಪಾಧ್ಯಕ್ಷರಾಗಿ ಸುಮಯ್ಯ ಹಾಗೂ ದುರ್ಗಾಂಬಿಕಾ ಅವಿರೋಧವಾಗಿ ಆಯ್ಕೆಗೊಂಡರು.ಕಾರ್ಯಕ್ರಮವನ್ನು ಶಾಲಾ ಅಧ್ಯಾಪಕರಾದ ಹರೀಶ್ ಸುಲಾಯ ನಿರೂಪಿಸಿ, ಹಿರಿಯ ಅಧ್ಯಾಪಕರಾದ ರಾಮಚಂದ್ರ ಕೆ ಎಂ ವಂದಿಸಿದರು.