ಕಾಸರಗೋಡು: ಜಿಲ್ಲೆಯ ಪಣತ್ತಡಿ ಗ್ರಾಮ ಪಂಚಾಯಿತಿ ನಬಾರ್ಡ್ ನೇತೃತ್ವದಲ್ಲಿ 60 ಲಕ್ಷ ರೂ.ಗಳ ಚಿತ್ತಾರಿಮಲ ಸ್ಪ್ರಿಂಗ್ ಶೆಡ್ ಆಧಾರಿತ ಜಲಾನಯನ ಯೋಜನೆ ಅನುಷ್ಠಾನಗೊಳಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ತಿಳಿಸಿದ್ದಾರೆ.
ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವು ಯೋಜನೆಯ ಅನುಷ್ಠಾನದ ಜವಾಬ್ದಾರಿಯನ್ನು ಹೊಂದಿದ್ದು, ಈ ಯೋಜನೆಯು 300 ಹೆಕ್ಟೇರ್ ಪ್ರದೇಶದಲ್ಲಿ 10 ನೀರಿನ ಬುಗ್ಗೆಗಳನ್ನು ಹೊಂದಿದ್ದು, ವೈಜ್ಞಾನಿಕ ಸಂರಕ್ಷಣೆ ಮತ್ತು ನಿರ್ವಹಣೆಯ ಮೂಲಕ ನೀರಿನ ಹರಿವನ್ನು ಹೆಚ್ಚಿಸುವುದರ ಜತೆಗೆ ಈ ಪ್ರದೇಶದ ಕುಡಿಯುವ ನೀರು ಮತ್ತು ನೀರಾವರಿ ಅಗತ್ಯಗಳನ್ನು ಪೂರೈಸುವುದು ಗುರಿಯಾಗಿದೆ. ಮಳೆಯಾಶ್ರಿತ ಪ್ರದೇಶಗಳಲ್ಲಿಯೂ ಮಣ್ಣು ಮತ್ತು ಜಲ ಸಂರಕ್ಷಣೆ ಚಟುವಟಿಕೆಗಳನ್ನು ಜಾರಿಗೊಳಿಸಲಾಗುವುದು. ಪರಿಶಿಷ್ಟ ಜಾತಿ ಸೇರಿದಂತೆ 200 ಕುಟುಂಬಗಳು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ.
ಕಾಸರಗೋಡು ಜಿಲ್ಲಾಡಳಿತ ಯೋಜನೆ ಅನುಷ್ಠಾನಕ್ಕೆ ಅಗತ್ಯ ಮಾರ್ಗಸೂಚಿಗಳನ್ನು ನೀಡುತ್ತಿದೆ. ಪ್ರಸಕ್ತ ಯೋಜನೆಯು ಅದರ ಪೂರ್ವ ಅನುಷ್ಠಾನದ ಹಂತದಲ್ಲಿದೆ. ಪ್ರದೇಶದ ವಿವರವಾದ ಜಲವಿಜ್ಞಾನದ ಸಮೀಕ್ಷೆ ಮತ್ತು ಜಿಐಎಸ್ ಮ್ಯಾಪಿಂಗ್ ಪೂರ್ಣಗೊಂಡಿದೆ. ಇಡೀ ಕುಟುಂಬವನ್ನು ಪ್ರತಿನಿಧಿಸುವ ವಿಲೇಜ್ ವೆಟ್‍ಲ್ಯಾಂಡ್ ಅಸೋಸಿಯೇಷನ್‍ನಿಂದ ಕ್ಷೇತ್ರ ಚಟುವಟಿಕೆಗಳನ್ನು ಸಂಯೋಜಿಸಲಾಗಿದೆ. ಎಂಟ್ರಿ ಪಾಯಿಂಟ್ ಆಕ್ಟಿವಿಟಿ (ಇಪಿಎ) ಭಾಗವಾಗಿ, ಈ ಪ್ರದೇಶದಲ್ಲಿ ಕುಸಿದ ಬುಗ್ಗೆಯನ್ನು ಸ್ವಚ್ಛಗೊಳಿಸಿ ರಕ್ಷಿಸಲಾಗುತ್ತಿದೆ. ಇದಕ್ಕಾಗಿ ಮೀಸಲಿರಿಸಿದ ಒಟ್ಟು1,25,000 ಮೊತ್ತದಲ್ಲಿ 25,000 ಶ್ರಮದಾನದ ಮೂಲಕ ಕೆಲಸ ನಡೆಸಲಾಗಿದೆ. ಪನತ್ತಡಿ ಗ್ರಾಮ ಪಂಚಾಯಿತಿ ಹಾಗೂ ಪನತ್ತಡಿ ಕೃಷಿ ಭವನ ಯೋಜನೆಗೆ ಅಗತ್ಯ ನೆರವು ನೀಡುತ್ತಿದೆ. ಮೂರು ವರ್ಷಗಳಲ್ಲಿ ಯೋಜನೆಯಡಿಯಲ್ಲಿ ಪ್ರದೇಶದ ಎಲ್ಲಾ ನೀರಿನ ಚಿಲುಮೆಗಳನ್ನು ಪುನರುಜ್ಜೀವನಗೊಳಿಸಲಾಗುವುದು ಎಂದು ತಿಳಿಸಿದರು.