ನಮ್ಮ ದೈನಂದಿನ ಜೀವನದಲ್ಲಿ ಎಷ್ಟು ಗಿಡಗಳು, ಹೂವುಗಳ ನಾವು ನೋಡುತ್ತೇವೆ. ಆದರೆ ಕೆಲವು ಗಿಡಗಳಿಂದ ಇರುವ ಆರೋಗ್ಯಕರ ಪ್ರಯೋಜನಗಳು ನಮಗೆ ಗೊತ್ತೇ ಇರುವುದಿಲ್ಲ. ಅದರಲ್ಲೂ ಕಾಲ ಬುಡದಲ್ಲಿಯೇ ನಾವು ಆರೋಗ್ಯ ಅಂಶ ಹೊಂದಿರುವ ಗಿಡಗಳ ಹೊಂದಿದ್ದರೂ ಆ ಬಗ್ಗೆ ಅರಿವಿರುವುದಿಲ್ಲ.
ಇಂತಹ ಗಿಡಗಳ ಸಾಲಿನಲ್ಲಿ ತುಂಬೆ ಗಿಡವೂ ಒಂದು. ತುಂಬೆ ಹೂವು ಶಿವನಿಗೆ ಅತ್ಯಂತ ಪ್ರಿಯವಾದ ಹೂವು ಎಂದು ಹೇಳಲಾಗುತ್ತದೆ. ತುಂಬೆ ಗಿಡಕ್ಕೂ ಸಹ ಆರ್ಯುವೇದದಲ್ಲಿ ಪ್ರಮುಖ ಸ್ಥಾನವಿದೆ. ಹಲವು ರೀತಿಯ ಆರೋಗ್ಯಕರ ಅಂಶಗಳ ಈ ತುಂಬೆ ಗಿಡ ಹೊಂದಿದೆ.ಹಾಗಾದ್ರೆ ಈ ತುಂಬೆ ಗಿಡದ ಉಪಯೋಗವೇನು? ಯಾವೆಲ್ಲಾ ಕಾಯಿಲೆಗೆ ಈ ತುಂಬೆಗಿಡ ಔಷಧಿಯಾಗಿ ಬಳಸಬಹುದು. ಇದರ ಲಾಭವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಮೊದಲು ಈ ತುಂಬೆ ಗಿಡಗಳು ಎಲ್ಲಿ ಬೆಳೆಯುತ್ತವೆ ಎಂಬುದನ್ನು ನೋಡೋಣ. ಇದು ತುಂಬಾನೆ ತಂಪಾಗಿರುವ ಪ್ರದೇಶದಲ್ಲಿ ಕಾಣಸಿಗುತ್ತವೆ. ಅದರಲ್ಲೂ ತೋಟ, ಹೊಲ, ಗದ್ದೆಯಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಇವುಗಳ ಹೂವು ಬಿಳಿ, ಹಾಗೂ ನೀಲಿ ಬಣ್ಣದಲ್ಲೂ ಇದರ ಹೂವು ಕಾಣಸಿಗುತ್ತದೆ. ಇದನ್ನು ದ್ರೋಣ ಪುಷ್ಪ ಅಂತಲೂ ಕರೆಯಲಾಗುತ್ತದೆ.
ನಿಮಗೆ ಕಾಲೋಚಿತವಾಗಿ ಶೀತ, ಕೆಮ್ಮು, ತಲೆ ನೋವು ಕಾಣಿಸಿಕೊಳ್ಳುತ್ತಿರಬಹುದು. ಏಕೆಂದರೆ ಹವಾಮಾನದಲ್ಲಿ ಸ್ವಲ್ಪ ಬದಲಾವಣೆಯಾದರು ಈ ಶೀತ ಕೆಮ್ಮು ಬರುವುದು ಸಾಮಾನ್ಯ. ಈ ಸಣ್ಣ ಪುಟ್ಟ ಕಾಯಿಲೆಗಳಿಗೆ ಎಂದಿಗೂ ಮಾತ್ರೆ ಸೇವಿಸುವ ಅಭ್ಯಾಸ ಇಟ್ಟುಕೊಳ್ಳಬೇಡಿ. ಅದಕ್ಕಿಂತ ಈ ತುಂಬೆ ಗಿಡದ ಒಂದು ಮದ್ದು ಪರಿಹಾರ ನೀಡಲಿದೆ.
10ರಿಂದ 15 ಹನಿಗಳಷ್ಟು ತುಂಬೆ ಹೂವಿನ ರಸವನ್ನು ತೆಗೆದು ಅದಕ್ಕೆ 30 ಹನಿ ಜೇನು ತುಪ್ಪ ಬೆರೆಸಿ ಚೆನ್ನಾಗಿ ಕರಡಬೇಕು. ಬಳಿಕ ಇದನ್ನು ಆಹಾರ ಸೇವನೆಗೂ ಮೊದಲು ಕುಡಿಯಬೇಕು. ಹೀಗೆ ಮಾಡುವುದರಿಂದ ಶೀತ ಕಡಿಮೆಯಾಗುತ್ತದೆ. ಇನ್ನೊಂದೆಡೆ ಈ ಗಿಡದ ಹೂವು, ಕಾಂಡ, ಎಲೆಯನ್ನು ತಂದು ಬಿಸಿ ನೀರಿನಲ್ಲಿ ಹಾಕಿ ಹಬೆ ತೆಗೆದುಕೊಳ್ಳುವುದರಿಂದ ಕ್ಷಣದಲ್ಲಿ ತಲೆ ನೋವು ಮಾಯವಾಗುತ್ತದೆ.
ಜ್ವರಕ್ಕೂ ಇದು ಸಿದ್ಧೌಷಧ
ಬರಿ ಶೀತ ಕೆಮ್ಮು ಮಾತ್ರವಲ್ಲ ಜ್ವರಕ್ಕೂ ಸಹ ಈ ಗಿಡದಿಂದ ಔಷಧಿ ತಯಾರಿಸಬಹುದು. 10 ಎಂ.ಎಲ್ ತುಂಬೆ ಗಿಡದ ರಸವನ್ನು ತೆಗೆದು ಅದಕ್ಕೆ ಚಿಟಿಕೆಯಷ್ಟು ಕರಿ ಮೆಣಸಿನ ಪುಡಿ ಸೇರಿಸಿ ಕುಡಿದರೆ ಜ್ವರ ಕಡಿಮೆಯಾಗುತ್ತದೆ.
ಹಸಿಗಾಯ ವಾಸಿಯಾಗಲು ಹಾಗೂ ಒಣಗಲು
ಈ ತುಂಬೆ ಗಿಡವನ್ನು ಬಿಸಿಲಿನಲ್ಲಿ ಒಣಗಿಸಿ ಅದನ್ನು ಚೆನ್ನಾಗಿ ಪುಡಿ ಮಾಡಿ. ಕಷಾಯ ಮಾಡಿ ಅದಕ್ಕೆ ಒಂದು ಚಿಟಿಕೆ ಅರಶಿನ ಬೆರೆಸಿ ಕುಡಿದರೆ ಮೈ ಮೇಲಿರುವ ಹಸಿಗಾಯ ವಾಸಿಯಾಗುತ್ತದೆ.
ಕಣ್ಣು ಉರಿ ಡಾರ್ಕ್ ಸರ್ಕಲ್‌ಗೆ ರಾಮಬಾಣ
ಇತ್ತೀಚಿಗೆ ಹೆಚ್ಚಿನವರು ಕಣ್ಣು ಉರಿ ಹಾಗೂ ಕಣ್ಣುಗಳ ಕೆಳಗೆ ಕಪ್ಪು ಬಣ್ಣದ ವೃತ್ತಾಕಾರದ ರಚನೆ ಹೊಂದಿರುತ್ತಾರೆ. ಇದಕ್ಕೆ ತುಂಬೆ ಗಿಡದ ರಸಕ್ಕೆ ನೀರು, ಹಾಲು ಹಾಕಿಕೊಂಡು ಮುಖವನ್ನು ತೊಳೆಯುವುದರಿಂದ ಡಾರ್ಕ್ ಸರ್ಕಲ್ ನಿವಾರಣೆಯಾಗುತ್ತದೆ.
ಜೀರ್ಣಕ್ರಿಯೆಗೆ ಉತ್ತಮ
ಹಲವು ಕಾರಣದಿಂದಾಗಿ ನಿಮ್ಮಲ್ಲಿ ಜೀರ್ಣಶಕ್ತಿ ಕಡಿಮೆಯಾಗಿದ್ದರೆ ಅಥವಾ ಜೀರ್ಣಕ್ರಿಯೆ ಸರಿಯಾಗಿ ಆಗದಿದ್ದರೆ ಈ ಗಿಡವನ್ನು ಚೆನ್ನಾಗಿ ತೊಳೆದು ಬಿಸಿನೀರಿನಲ್ಲಿ ಕುದಿಸಿ ಒಂದು ಚಿಟಿಕೆ ಉಪ್ಪು ಹಾಕಿ ಕುಡಿದರೆ ಜೀರ್ಣಕ್ರಿಯೆಗೆ ಸಹಕಾರಿಯಾಗಲಿದೆ. ಹೊಟ್ಟೆಯ ಸಮಸ್ಯೆಗಳು ಪರಿಹಾರವಾಗಲಿದೆ.
ಜೊತೆಗೆ ಹೆಚ್ಚಿನ ಸೇವನೆಯಿಂದ ಅಪಾಯವೂ ಉಂಟಾಗಬಹುದು. ಈ ಹೂವುಗಳು ಬಹಳ ಕಹಿಯಾಗಿರುತ್ತದೆ, ಹೀಗಾಗಿ ಇದರ ಬಳಕೆಗೂ ಮುನ್ನ ಆರ್ಯುವೇದ ವೈದ್ಯರ ಅಥವಾ ತಜ್ಞರ ಸಲಹೆ ಪಡೆಯುವುದು ಉತ್ತಮ.