ವಿಶ್ವಸಂಸ್ಥೆ: ಕಳೆದ ವರ್ಷ ವಿಶ್ವದಾದ್ಯಂತ ಸುಮಾರು 4 ಕೋಟಿ ಮಂದಿಯಲ್ಲಿ ಎಚ್ಐವಿ ವೈರಸ್ ಪತ್ತೆಯಾಗಿದ್ದು ಈ ಪೈಕಿ 90 ಲಕ್ಷ ಜನರು ಯಾವುದೇ ಚಿಕಿತ್ಸೆಯನ್ನು ಪಡೆದಿಲ್ಲ. ಇದರ ಪರಿಣಾಮದಿಂದಾಗಿ ಪ್ರತಿ ನಿಮಿಷಕ್ಕೂ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆಯ (ಯುಎನ್) ವರದಿ ತಿಳಿಸಿದೆ.
ಏಡ್ಸ್ಗೆ ಸಂಬಂಧಿಸಿದ ಹೊಸ ವರದಿಯನ್ನು ವಿಶ್ವಸಂಸ್ಥೆಯ ಜುಲೈ 22 (ಸೋಮವಾರ) ಬಿಡುಗಡೆ ಮಾಡಿದೆ. ಇದರ ಪ್ರಕಾರ ಜಾಗತಿಕ ಏಡ್ಸ್ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ, ಪೂರ್ವ ಯುರೋಪ್ ಮತ್ತು ಮಧ್ಯ ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕದಲ್ಲಿ ಎಚ್ಐವಿ ಪೀಡತರ ಸಂಖ್ಯೆ ಹೆಚ್ಚಳ ಮತ್ತು ಅಗತ್ಯ ಹಣಕಾಸಿನ ಅಲಭ್ಯತೆಯಿಂದ ಅಂದುಕೊಂಡಷ್ಟು ಪ್ರಗತಿ ಕಂಡಿಲ್ಲ.
2023 ರಲ್ಲಿ, ಜಾಗತಿಕವಾಗಿ 3.99 ಕೋಟಿ ಮಂದಿಯಲ್ಲಿ ಎಚ್ಐವಿ ಕಂಡು ಬಂದಿತ್ತು. ಇದರಲ್ಲಿ ಶೇ.88 ರಷ್ಟು ಜನರಿಗೆ ತಾವು ಎಚ್ಐವಿ ಪೀಡಿತರು ಎಂದು ತಿಳಿದಿತ್ತು. ಶೇ.77 ರಷ್ಟು ಮಂದಿಗೆ ಚಿಕಿತ್ಸೆ ಪಡೆದಿದ್ದು ಅವರಲ್ಲಿ ಶೇ.72 ರಷ್ಟು ಪ್ರಮಾಣದ ವೈರಸ್ ತಗ್ಗಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.
2004ರಲ್ಲಿ ಎಚ್ಐವಿಯಿಂದ 21 ಲಕ್ಷ ಮಂದಿ ಸಾವನ್ನಪ್ಪಿದರು. 2023 ರಲ್ಲಿ 6.30 ಲಕ್ಷ ಮಂದಿ ಮೃತಪಟ್ಟಿದ್ದಾರೆ. 2004ಕ್ಕೆ ಹೋಲಿಸಿದರೆ 2023ರಲ್ಲಿ ಮೃತರ ಸಂಖ್ಯೆ ಅಪಾರ ಪ್ರಮಾಣದಲ್ಲಿ ತಗ್ಗಿದೆ. 2025ರ ವೇಳೆಗೆ ಐಚ್ಐವಿಯಿಂದ ಮೃತರಾಗುವವರ ಸಂಖ್ಯೆಯನ್ನು 2.5 ಲಕ್ಷಕಿಂತ ಕಡಿಮೆಗೊಳಿಸಬೇಕು ಎಂದು ಗುರಿ ಹೊಂದಲಾಗಿದೆ ಎಂದು ವಿಶ್ವಸಂಸ್ಥೆ ಭರವಸೆ ವ್ಯಕ್ತಪಡಿಸಿದೆ.
ಆಫ್ರಿಕಾದಲ್ಲಿ ಎಚ್ಐವಿ ಸೋಂಕು ಹದಿಹರೆಯದ ಯುವತಿಯರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಲೈಗಿಂಕ ಕಾರ್ಯಕರ್ತರು ಪುರುಷ ಸಲಿಂಗಿಗಳು ಮತ್ತು ಇಂಜೆಕ್ಷನ್ಗಳಿಂದ ಸೋಂಕು ಹರಡುವ ಪ್ರಮಾಣ ಏರಿಕೆಯಾಗಿದೆ.