ಚುನಾವಣಾ ಬಳಿಕ ಸಿಗೋಣ ಅಂತಾ ಹೇಳಿದ್ದೆ...
ಅಂತಿಮವಾಗಿ ನಾವೆಲ್ಲರೂ ಫೆಬ್ರುವರಿ ತಿಂಗಳಿಂದ ಕಾಯುತ್ತಿದ್ದ ದಿನಗಳು ಬಂದಿವೆ. 'ಮನ್ ಕಿ ಬಾತ್' ಮೂಲಕ ನಮ್ಮ ಕುಟುಂಬ ಸದಸ್ಯರ ಬಳಿ ಮತ್ತೆ ಬಂದಿದ್ದೇನೆ. ಫೆಬ್ರುವರಿಯಲ್ಲಿ ಚುನಾವಣಾ ಫಲಿತಾಂಶದ ಬಳಿಕ ಮತ್ತೆ ಭೇಟಿಯಾಗುವುದಾಗಿ ಹೇಳಿದ್ದೆ. ಮುಂಗಾರು ಮಳೆಯ ಆಗಮನವು ಸಹ ಮತ್ತಷ್ಟು ಖುಷಿಪಡಿಸಿದೆ ಎಂದು ಅವರು ಹೇಳಿದ್ದಾರೆ.
ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿದ್ದಕ್ಕೆ ಧನ್ಯವಾದ...
ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಚಲವಾದ ನಂಬಿಕೆಯನ್ನು ಇರಿಸಿದ್ದಕ್ಕಾಗಿ ನಾನು ದೇಶದ ಜನರಿಗೆ ಧನ್ಯವಾದಗಳನ್ನು ಹೇಳಲಿಚ್ಛಿಸುತ್ತೇನೆ. 2024ರ ಲೋಕಸಭೆ ಚುನಾವಣೆ ಜಗತ್ತಿನ ಅತಿ ದೊಡ್ಡ ಪ್ರಜಾತಂತ್ರದ ಹಬ್ಬವಾಗಿತ್ತು. 65 ಕೋಟಿಗೂ ಹೆಚ್ಚು ಮಂದಿ ಮತದಾನದ ಹಕ್ಕು ಚಲಾಯಿಸಿದ್ದಾರೆ. ಯಾವುದೇ ದೇಶದಲ್ಲಿ ಇಷ್ಟು ದೊಡ್ಡ ಚುನಾವಣೆ ನಡೆದಿಲ್ಲ. ಇದಕ್ಕಾಗಿ ಚುನಾವಣಾ ಆಯೋಗ ಮತ್ತು ಇದಕ್ಕೆ ಸಂಬಂಧಿಸಿದ ಪ್ರತಿಯೊಬ್ಬರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಗಿಡ ನೆಡಲು ಮನವಿ...
ಈ ವರ್ಷದ ವಿಶ್ವ ಪರಿಸರ ದಿನದಂದು 'ಏಕ್ ಪೇಡ್ ಮಾ ಕೆ ನಾಮ್' (ತಾಯಿಗಾಗಿ ಒಂದು ಗಿಡ) ಅಭಿಯಾನವನ್ನು ಪ್ರಾರಂಭಿಸಲಾಗಿದೆ. ನನ್ನ ತಾಯಿಯ ಹೆಸರಲ್ಲಿ ನಾನು ಗಿಡವನ್ನು ನೆಟ್ಟಿದ್ದೇನೆ. ದೇಶದ ಎಲ್ಲರೂ ತಾಯಿಗಾಗಿ ಒಂದು ಗಿಡ ನೆಡುವಂತೆ ಮನವಿ ಮಾಡುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಬುಡಕಟ್ಟು ಜನಾಂಗಕ್ಕೆ ಮಹತ್ವದ ದಿನ...
ಇಂದು (ಜೂನ್ 30) ಬುಡಕಟ್ಟು ಜನಾಂಗಕ್ಕೆ ಮಹತ್ವದ ದಿನವಾಗಿದ್ದು, 'Hul Diwas' ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ವಿದೇಶಿ ಸಾಮ್ರಾಜ್ಯಶಾಹಿ ಶಕ್ತಿಗಳ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರಾದ ವೀರ ಸಿಧು ಮತ್ತು ಕನ್ಹು ಅವರನ್ನು ಪ್ರಧಾನಿ ಮೋದಿ ಸ್ಮರಿಸಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಪಟುಗಳಿಗೆ ಶುಭ ಹಾರೈಕೆ...
ಮುಂದಿನ ತಿಂಗಳು ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಭಾರತೀಯ ಕ್ರೀಡಾಪಟುಗಳಿಗೆ ಪ್ರಧಾನಿ ಮೋದಿ ಶುಭ ಹಾರೈಸಿದ್ದಾರೆ. ಇದಕ್ಕಾಗಿ 'cheer4Bharat' ಅಭಿಯಾನದಡಿಯಲ್ಲಿ ಶುಭ ಹಾರೈಸುವಂತೆಯೂ ಕೋರಿದ್ದಾರೆ.
ಪ್ರತಿಯೊಬ್ಬರಿಗೂ ಹೆಮ್ಮೆ...
ಭಾರತೀಯ ಸಂಸ್ಕೃತಿ ಜಗತ್ತಿನಾದ್ಯಂತ ವೈಭವವನ್ನು ಗಳಿಸುತ್ತಿರುವುದು ಪ್ರತಿಯೊಬ್ಬರನ್ನು ಹೆಮ್ಮೆಪಡುವಂತೆ ಮಾಡಿದೆ ಎಂದು ಅವರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ 'ಮನ್ ಕಿ ಬಾತ್' ಸಂಪೂರ್ಣ ಕಾರ್ಯಕ್ರಮ ಇಲ್ಲಿ ವೀಕ್ಷಿಸಿ...