ಕುಲಾಂತರಿ ತಳಿ ಪರಿಶೀಲನಾ ಸಮಿತಿಯು (ಜಿಇಎಸಿ) ಸಾಸಿವೆ ತಳಿ ಡಿಎಂಎಚ್-11 ಅನ್ನು ಪರೀಕ್ಷೆಗೆ ಒಳಪಡಿಸಲು ಅನುಮತಿ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಕೇಂದ್ರ ಅದನ್ನು ಅನುಮೋದಿಸಿತ್ತು. ಇದನ್ನು ವಿರೋಧಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಅನುಮತಿ ನಿರಾಕರಿಸಿ ಆದೇಶ ನೀಡಿತ್ತು.
ಈ ಆದೇಶ ಪ್ರಶ್ನಿಸಿ ಜೀನ್ ಕ್ಯಾಂಪೇನ್ ಎಂಬ ಸರ್ಕಾರೇತರ ಸಂಸ್ಥೆ (ಎನ್‌ಜಿಒ) ಮತ್ತು ಸಾಮಾಜಿಕ ಕಾರ್ಯಕರ್ತೆ ಅರುಣಾ ರೋಡ್ರಿಗಸ್ ಎಂಬುವವರು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು. ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಸಂಜಯ್ ಕರೋಲ್ ಅವರಿದ್ದ ಪೀಠಕ್ಕೆ ಒಮ್ಮತದ ತೀರ್ಪು ನೀಡಲು ಸಾಧ್ಯವಾಗಲಿಲ್ಲ.
ಆದರೆ, ನ್ಯಾಯ ನಿರ್ಣಯಕ್ಕಾಗಿ ಈ ಪ್ರಕರಣವನ್ನು ಸೂಕ್ತ ನ್ಯಾಯಪೀಠಕ್ಕೆ ವರ್ಗಾಯಿಸುವಂತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರಿಗೆ ಮನವಿ ಸಲ್ಲಿಸಲು ನ್ಯಾಯಮೂರ್ತಿಗಳಿಬ್ಬರು ನಿರ್ಧರಿಸಿದರು.
ಇದೇವೇಳೆ, ಕುಲಾಂತರಿ ತಳಿ (ಜಿಎಂ) ಬೆಳೆಗಳ ಕುರಿತು ರಾಷ್ಟ್ರೀಯ ನೀತಿ ರೂಪಿಸುವಂತೆ ಪೀಠವು ಒಮ್ಮತದಿಂದ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತು. ನೀತಿ ರೂಪಿಸುವುದಕ್ಕೂ ನಾಲ್ಕು ತಿಂಗಳ ಮೊದಲೇ ಈ ವಿಷಯಕ್ಕೆ ಸಂಬಂಧಪಟ್ಟ ತಜ್ಞರಿಂದ ಮಾಹಿತಿ ಕಲೆಹಾಕುವ ಕೆಲಸವನ್ನು ಪರಿಸರ ಸಚಿವಾಲಯ ಮಾಡಬೇಕು ಎಂದೂ ಪೀಠವು ನಿರ್ದೇಶಿಸಿತು.
'ಕುಲಾಂತರಿ ತಳಿಗಳನ್ನು ತೆರದ ಪರಿಸರಲ್ಲಿ ಬೆಳೆದು ಪರೀಕ್ಷೆಗೆ ಒಳಪಡಿಸುವ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಂಡ ಜಿಇಎಸಿ ತಂಡದಲ್ಲಿ ಆರೋಗ್ಯ ಇಲಾಖೆಯ ಯಾರೊಬ್ಬರೂ ಇರಲಿಲ್ಲ. ಹೀಗಾಗಿ ಈ ನಿರ್ಧಾರವು ಸಮರ್ಪಕವಾಗಿಲ್ಲ' ಎಂದು ನ್ಯಾ. ಬಿ.ವಿ. ನಾಗರತ್ನ ಅವರು ಹೇಳಿದರು.
ಇದೇವೇಳೆ, 'ಯಾರೊಬ್ಬರ ವೈಯಕ್ತಿಕ ಅನಿಸಿಕೆಯ ಕಾರಣಕ್ಕೆ ಜಿಇಎಸಿ ನಿರ್ಧಾರಕ್ಕೆ ಚ್ಯುತಿ ಆಗಬಾರದು, ಜೊತೆಗೆ ಅದರ ತೀರ್ಮಾನವು ಅಸಮರ್ಪಕವೂ ಅಲ್ಲ. ಕಠಿಣ ಮುಂಜಾಗ್ರತಾ ಕ್ರಮಗಳೊಂದಿಗೆ ಕುಲಾಂತರಿ ಸಾಸಿವೆಯನ್ನು ತೆರೆದ ಪರಿಸರದಲ್ಲಿ ಪರೀಕ್ಷಿಸಬಹುದು' ಎಂದು ನ್ಯಾಯಮೂರ್ತಿ ಕರೋಲ್ ಹೇಳಿದರು.