ಚೆನ್ನೈ: ಎರಡು ರಾಜ್ಯಗಳ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮಾಜಿ ರಾಜ್ಯಪಾಲೆ ಡಾ.ತಮಿಳಿಸೈ ಸೌಂದರರಾಜನ್ ಅವರಿಗೆ ಬಿಜೆಪಿ ನಾಯಕತ್ವ ರಾಷ್ಟ್ರೀಯ ಮಟ್ಟದ ಹುದ್ದೆ ನೀಡುವ ಕುರಿತು ಚಿಂತನೆ ನಡೆಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಪ್ರಸ್ತುತ ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿದೆ. ಬಿಜೆಪಿ ನಾಯಕತ್ವವು ಮಿತ್ರಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಅಧಿಕಾರ ನಡೆಸುವ ಅಗತ್ಯವೂ ಇದೆ. ಈ ನಡುವೆ ತಮಿಳುನಾಡಿನಲ್ಲಿ ಪಕ್ಷದ ಭಾರಿ ಸೋಲಿಗೆ ಕಾರಣವಾದ ಅಂಶಗಳ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಕಡಿಮೆ ಸ್ಥಾನಗಳನ್ನು ಗೆದ್ದಿರುವ ರಾಜ್ಯಗಳು ಹಾಗೂ ಭಾರಿ ಸೋಲು ಕಂಡಿರುವ ರಾಜ್ಯಗಳಿಗೆ ಸಂಬಂಧಿಸಿದಂತೆ ಪಕ್ಷದ ಉಸ್ತುವಾರಿಗಳ ಬದಲಾವಣೆಗೆ ಕಾರ್ಯತಂತ್ರಗಳು ಮುಂದುವರಿದಿವೆ.
ಈ ಪರಿಸ್ಥಿತಿಯಲ್ಲಿ ಎರಡು ದಿನಗಳ ಹಿಂದೆ ತಮಿಳಿಸೈ ದೆಹಲಿಗೆ ತೆರಳಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ತಮಿಳಿಸೈ ಅವರಿಗೆ ರಾಷ್ಟ್ರ ಮಟ್ಟದ ಹುದ್ದೆ ನೀಡುವ ಕುರಿತು ಅಮಿತ್ ಶಾ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಸದ್ಯ ಪಕ್ಷದ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ತಮಿಳಿಸೈ ರಾಷ್ಟ್ರೀಯ ಮಟ್ಟದ ಪಕ್ಷದ ಹುದ್ದೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಆದರೆ ಪಕ್ಷದ ದೃಷ್ಟಿಯಿಂದ ಹೈಕಮಾಂಡ್ ತಮಿಳಿಸೈ ಅವರಿಗೆ ರಾಷ್ಟ್ರ ಮಟ್ಟದ ಹುದ್ದೆಯನ್ನು ಕಟ್ಟಿಕೊಡುತ್ತದೆಯೇ? ಅಥವಾ ಕೇಂದ್ರ ಸರ್ಕಾರವು ಯಾವುದೇ ನಾಮನಿರ್ದೇಶಿತ ಹುದ್ದೆಯನ್ನು ನೀಡುತ್ತದೆಯೇ? ಎಂಬುದನ್ನು ಕಾದುನೋಡಬೇಕಿದೆ.