ಇತ್ತೀಚಿಗೆ ಸಂಭವಿಸಿದ್ದ ಮೈಕ್ರೋಸಾಫ್ಟ್ ಜಾಗತಿಕ ತಾಂತ್ರಿಕ ವೈಫಲ್ಯವು ವಿಶ್ವಾದ್ಯಂತ ವಿಮಾನಯಾನ ಸಂಸ್ಥೆಗಳು,ಸುದ್ದಿವಾಹಿನಿಗಳು,ಐಟಿ ಸಿಸ್ಟಮ್‌ಗಳು,ಬ್ಯಾಂಕಿಂಗ್ ಕಾರ್ಯಾಚರಣೆಗಳು,ಸರಕಾರಿ ಕಚೇರಿಗಳು ಮತ್ತು ಕಂಪನಿಗಳ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡಿತ್ತು ಮತ್ತು 8.5 ಮಿಲಿಯನ್ ಕಂಪ್ಯೂಟರ್‌ಗಳು ಅಸ್ತವ್ಯಸ್ತಗೊಂಡಿದ್ದವು.
ಸೈಬರ್ ಸೆಕ್ಯೂರಿಟಿ ಕಂಪನಿ ಕ್ರೌಡ್‌ಸ್ಟ್ರೈಕ್ ತನ್ನ ವಾಡಿಕೆಯ ಅಪ್‌ಡೇಟ್‌ನ್ನು ಹೊರತಂದ ಬಳಿಕ ಉಂಟಾಗಿದ್ದ 'ಬ್ಲ್ಯೂಸ್ಕ್ರೀನ್ ಆಫ್ ಡೆತ್' ಜು.19ರಂದು ಸಂಭವಿಸಿದ್ದ ಈ ಜಾಗತಿಕ ಸ್ಥಗಿತಕ್ಕೆ ಕಾರಣವಾಗಿತ್ತು.
'ಕ್ರೌಡ್‌ಸ್ಟ್ರೈಕ್‌ನ ಅಪ್‌ಡೇಟ್‌ನಿಂದಾಗಿ 8.5 ಮಿ.ವಿಂಡೋ ಸಾಧನಗಳು ಬಾಧಿತವಾಗಿದ್ದವು ಎಂದು ನಾವು ಪ್ರಸ್ತುತ ಅಂದಾಜಿಸಿದ್ದೇವೆ. ಸೇವೆಗಳ ಪುನರಾರಂಭಕ್ಕಾಗಿ ಗ್ರಾಹಕರೊಂದಿಗೆ ನೇರವಾಗಿ ತೊಡಗಿಕೊಳ್ಳಲು ನೂರಾರು ಮೈಕ್ರೋಸಾಫ್ಟ್ ಇಂಜಿನಿಯರ್‌ಗಳು ಮತ್ತು ತಜ್ಞರನ್ನು ನಿಯೋಜಿಸಿದ್ದೇವೆ 'ಎಂದು ಮೈಕ್ರೋಸಾಫ್ಟ್ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದೆ.
ಆದರೆ ಈ ಜಾಗತಿಕ ವೈಫಲ್ಯವು ಮನೆಗಳಲ್ಲಿಯ ಕಂಪ್ಯೂಟರ್ (ಹೋಮ್ ಪಿಸಿ)ಗಳ ಮೇಲೆ ಯಾವುದೇ ಪರಿಣಾಮವನ್ನುಂಟು ಮಾಡಿರಲಿಲ್ಲ ಎಂದು ಹಲವಾರು ವರದಿಗಳು ತಿಳಿಸಿವೆ. ಕ್ರೌಡ್‌ಸ್ಟ್ರೈಕ್‌ನ ಉತ್ಪನ್ನಗಳನ್ನು ಪ್ರಾಥಮಿಕವಾಗಿ ಸೈಬರ್ ದಾಳಿಯ ವಿರುದ್ಧ ಬಲವಾದ ರಕ್ಷಣೆಯ ಅಗತ್ಯವಿರುವ ಪ್ರಮುಖ ಕಂಪನಿಗಳು ಬಳಸುತ್ತವೆ. ಹೋಮ್ ಪಿಸಿಗಳಲ್ಲ ಎನ್ನುವುದು ಇದಕ್ಕೆ ಮುಖ್ಯ ಕಾರಣವಾಗಿದೆ.
'ನನಗೆ ತಿಳಿದಿರುವಂತೆ ಹೋಮ್ ಪಿಸಿಗಳ ಬಗ್ಗೆ ಕಳವಳ ಪಡಬೇಕಾದ ಅಗತ್ಯವಿಲ್ಲ ಎಂದು ಕಾನ್ಸಾಸ್ ಸಿಟಿಯ ಲೋಕ್ವಿಯಂಟ್ ಟೆಕ್ನಾಲಜಿ ಸರ್ವಿಸಸ್‌ನ ಇನ್‌ಫಾರ್ಮೇಷನ್ ಸೆಕ್ಯುರಿಟಿ ಮ್ಯಾನೇಜರ್ ನಿಕೋಲ್ ಬರೆಸ್ ಹೇಳಿದ್ದನ್ನು ವರದಿಯೊಂದು ಉಲ್ಲೇಖಿಸಿದೆ.
ಜಾಗತಿಕ ಸ್ಥಗಿತವು ವ್ಯಕ್ತಿಯ ಲೊಕೇಷನ್‌ನ್ನು ಅವಲಂಬಿಸಿ ಬ್ಯಾಂಕಿಂಗ್ ಮತ್ತು ಕೆಲವು ತುರ್ತು ಸೇವೆಗಳ ಮೇಲೆ ಪರಿಣಾಮ ಬೀರಬಹುದು ಎಂದು ತಿಳಿಸಿರುವ ಬರೆಸ್, ಕ್ರೌಡ್‌ಸ್ಟ್ರೈಕ್ ಕಂಪನಿಗಳಿಗೆ ಕ್ಲೌಡ್ ಸೊಲ್ಯೂಷನ್‌ಗಳನ್ನು ಒದಗಿಸುವ ಸೈಬರ್ ಸೆಕ್ಯೂರಿಟಿ ಕಂಪನಿಯಾಗಿದೆ. ಅದು ಸುಮಾರು 1,000 ಬಳಕೆದಾರ ಕನಿಷ್ಠ ಪರವಾನಿಗೆ ಅಗತ್ಯಗಳನ್ನು ಹೊಂದಿದೆ. ಹೀಗಾಗಿ ಮನೆಗಳಲ್ಲಿನ ಅಂತಿಮ ಬಳಕೆದಾರರು ಅದನ್ನು ಬಳಸುವುದಿಲ್ಲ ಎಂದು ಹೇಳಿದ್ದಾರೆ.
ಇದು ಯಾವುದೇ ಸೈಬರ್ ಘಟನೆ ಅಥವಾ ಸೈಬರ್ ದಾಳಿಯಲ್ಲ. ವಿಂಡೋಸ್ ಹೋಸ್ಟ್‌ನಲ್ಲಿ ಮಾತ್ರ ದೋಷವುಂಟಾಗಿದೆ,ಮ್ಯಾಕ್ ಮತ್ತು ಲಿನಕ್ಸ್ ಅಬಾಧಿತವಾಗಿವೆ. ಸಮಸ್ಯೆಯನ್ನು ಪತ್ತೆ ಹಚ್ಚಲಾಗಿದೆ,ಪ್ರತ್ಯೇಕಿಸಲಾಗಿದೆ ಮತ್ತು ಪರಿಹಾರವನ್ನು ನಿಯೋಜಿಸಲಾಗಿದೆ ಎಂದು ಮೈಕ್ರೋಸಾಫ್ಟ್ ಹೇಳಿಕೆಯಲ್ಲಿ ತಿಳಿಸಿದೆ.