ಮಂಜೇಶ್ವರ: ಮಂಜೇಶ್ವರ ಎಸ್ ಎ ಟಿ ಶಾಲೆಯು ಜಿಲ್ಲೆಯ ಅತ್ಯುತ್ತಮ ಲಿಟಲ್ ಕೈಟ್ಸ್ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಜಿಲ್ಲಾಮಟ್ಟದಲ್ಲಿ ಮೂರನೇ ಸ್ಥಾನ ಪಡೆಯುವ ಮೂಲಕ ಶಾಲೆ ಅತ್ಯುತ್ತಮ ಲಿಟಲ್ ಕೈಟ್ಸ್ ಘಟಕವಾಗಿ ಹೊರಹೊಮ್ಮಿದೆ.
ಚಟ್ಟಂಚಾಲ್ ಸಿ ಎ ಎಚ್ ಎಸ್ ಪ್ರಥಮ ಮತ್ತು ತಚ್ಚಂಗಾಡ್ ಜಿ ಎಚ್ ಎಸ್ ದ್ವಿತೀಯ ಸ್ಥಾನ ಪಡೆದಿವೆ. ಕೇರಳ ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯೋಜನೆ ಅಂಗವಾಗಿ ಶಾಲೆಗಳಿಗಾಗಿ ಜಾರಿಗೆ ತಂದಿರುವ ಹೈ ಟೆಕ್ ಸ್ಕೂಲ್ ಯೋಜನೆಯ ಅಂಗವಾಗಿ 120 ಲಿಟಲ್ ಕೈಟ್ಸ್ ಘಟಕಗಳು ರಾಜ್ಯದಲ್ಲಿವೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ಯಾಧುನಿಕ ತರಬೇತಿಯು ಆಯ್ದ ಲಿಟಲ್ ಕೈಟ್ಸ್ ವಿದ್ಯಾರ್ಥಿಗಳಿಗೆ ಈ ಯೋಜನೆಯಡಿ ಶಾಲೆಗಳಲ್ಲಿ ಲಭ್ಯವಾಗುತ್ತದೆ.
ಸೈಬರ್ ಭದ್ರತೆಯ ಕುರಿತಾದ ವಿಶೇಷ ತರಬೇತಿ ಸಹ ಇದರಲ್ಲಿ ಒಳಗೊಂಡಿದೆ. ಪ್ರಥಮ ದ್ವಿತೀಯ ತೃತೀಯ ಸ್ಥಾನಿಗಳಿಗೆ ಕ್ರಮವಾಗಿ30000, 25000 ಮತ್ತು 15000 ನಗದು ಪ್ರಶಸ್ತಿ ದೊರೆತಿದೆ.
ತಿರುವನಂತಪುರದ ಕೇರಳ ವಿಧಾನಸಭಾ ಕಾಂಪ್ಲೆಕ್ಸ್ ನ ಶಂಕರ್ ತಂಬಿ ಹಾಲ್ ನಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಕೇರಳದ ಶಿಕ್ಷಣ ಸಚಿವ ಶಿವನ್ ಕುಟ್ಟಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.