ಬೆಂಗಳೂರು: ಶ್ವಾಸಕೋಶ ಕ್ಯಾನ್ಸರ್ಗೆ ತುತ್ತಾದ ಕನ್ನಡದ ಖ್ಯಾತ ನಟಿ, ನಿರೂಪಕಿ ಅಪರ್ಣಾ ವಸ್ತಾರೆ ಅವರಿಗೆ ಪತಿ ನಾಗರಾಜ್ ವಸ್ತಾರೆ ಅವರು ಕವನದ ಮೂಲಕ ಭಾವುಕ ವಿದಾಯ ಹೇಳಿದ್ದಾರೆ. ಅಲ್ಲದೆ, ತಮ್ಮ ಪತ್ನಿಯ ಕೊನೆಯ ಕ್ಷಣದ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ನಾಗರಾಜ್ ಅವರು ಭಾವನಾತ್ಮಕವಾಗಿದೆ ಬರೆದುಕೊಂಡಿದ್ದಾರೆ.
ಕವನದ ಸಾಲುಗಳು ಈ ಕೆಳಕಂಡಂತಿವೆ…
ಬೆಳಗಿಕೊಂಡಿರೆಂದು
ಕಿಡಿ ತಾಕಿಸಿ ಹೊರಟಿತು
ಹೆಣ್ಣು
ಚಿತ್ತು ತೆಗೆದು
ಬತ್ತಿಯ ನೆತ್ತಿ ಚೆನ್ನಾಗಿಸಿ
ತಿರುಪಿ ತಿದ್ದಿ
ಇರು
ತುಸುವಿರೆಂದು ಕರೆದರೂ
ನಿಲ್ಲದೆಯೇ
ಬೇರಾವುದೋ ಕರೆಗೆ
ತಣ್ಣಗೆ ಓಗೊಟ್ಟ ಮೇರೆಯಲ್ಲಿ
ಒಂದೇ ಒಂದು
ನಿಮಿಷ
ಬಂದೇನೆಂದು ಕಡೆಗಳಿಗೆ
ಯ ಸೆರಗಿನ ಬೆನ್ನಿನಲ್ಲಿ
ಅಂದು.
ಕಾದಿದ್ದೇನೆ
ಈಗ ಬಂದಾಳೆಂದು
ಆಗ ಬಂದಾಳೆಂದು
ಮರಳಿ
ಜೀವ ತಂದಾಳೆಂದು
ಇದು
ಮೂರನೇ ದಿವಸ
ಇಷ್ಟಾಗಿ
ಬೆಳಗಲಿಟ್ಟ ಕಿರಿಸೊಡರ
ಬೆಳಕು ನಾನು
ಉರಿವುದಷ್ಟೇ ಕೆಲಸ
ಇರುವ ತನಕ.
ಅಪರ್ಣಾ ಅವರು ನಿನ್ನೆ (ಜುಲೈ 11) ರಾತ್ರಿ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ತಮ್ಮ ಬನಶಂಕರಿ ನಿವಾಸದಲ್ಲಿ ಕೊನೆಯಿಸಿರೆಳೆದಿದ್ದಾರೆ. ಕನ್ನಡದ ಧ್ರುವತಾರೆಯೊಂದು ಮರೆಯಾಗಿದ್ದು, ಸ್ಯಾಂಡಲ್ವುಡ್ಗೆ ಒಂದು ದೊಡ್ಡ ಆಘಾತವಾಗಿದೆ. ಅಪರ್ಣಾ ಅವರು 2005ರಲ್ಲಿ ಯುವ ವಾಸ್ತುಶಿಲ್ಪಿ ಹಾಗೂ ಕವಿ ನಾಗರಾಜ ವಸ್ತಾರೆ ಅವರನ್ನು ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸಿದರು. ಅಪರ್ಣ ಅವರ ತಂದೆ ಕೆ.ಎಸ್.ನಾರಾಯಣಸ್ವಾಮಿ ಕನ್ನಡಪ್ರಭ ಪತ್ರಿಕೆಯಲ್ಲಿ ಪುರವಣಿ ಸಂಪಾದಕರಾಗಿದ್ದರು.
ಶ್ವಾಸಕೋಶ ಕ್ಯಾನ್ಸರ್ನಿಂದ ಮೃತಪಟ್ಟಿದ್ದಾರೆ ಎಂಬ ಸುದ್ದಿ ಕೇಳಿ ಅಭಿಮಾನಿಗಳೆಲ್ಲರು ಶಾಕ್ ಆಗಿದ್ದಾರೆ. ನಿಜಕ್ಕೂ ಈ ಸುದ್ದಿಯನ್ನು ನಂಬಲಾಗುತ್ತಿಲ್ಲ. ಅಪರ್ಣಾ ಸಾವಿನ ವಿಚಾರ ತಿಳಿದು ಇಡೀ ಚಿತ್ರರಂಗವೇ ಕಂಬನಿ ಮಿಡಿಯುತ್ತಿದೆ. ಸ್ವಚ್ಛ ಕನ್ನಡದ ದನಿಯೊಂದು ಮರೆಯಾಗಿದ್ದು, ಕನ್ನಡಭಿಮಾನಿಗಳಿಗೆ ಇದಕ್ಕಿಂತ ನೋವಿನ ಸಂಗತಿ ಮತ್ತೊಂದಿಲ್ಲ. ಸರ್ಕಾರದ ಸಾಕಷ್ಟು ಕಾರ್ಯಕ್ರಮಗಳನ್ನು ಅಪರ್ಣಾ ಅವರು ನಿರೂಪಣೆ ಮಾಡಿದ್ದರು. ಅಲ್ಲದೆ, ಮೆಟ್ರೋದಲ್ಲೂ ಕೂಡ ಅಪರ್ಣಾ ಅವರ ಧ್ವನಿ ಕೇಳುತ್ತಿತ್ತು. ಆದರೆ, ಇನ್ನು ಮುಂದೆ ಕೇವಲ ನೆನಪು ಮಾತ್ರ.