ಶಿರೂರು: ಹೆದ್ದಾರಿಯಲ್ಲಿ ಬದಿ ಲಾರಿಯನ್ನು ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಗುಡ್ಡ ಕುಸಿದು ಯುವಕ ನಾಪತ್ತೆಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರೂರಿನಲ್ಲಿ ಸಂಭವಿಸಿತ್ತು. ಕೇರಳ ಕೋಝಿಕ್ಕೋಡ್ ಮೂಲದ ಯುವಕ ಅರ್ಜುನ್ (30) ಲಾರಿ ಚಾಲಕನಾಗಿದ್ದು, ಜುಲೈ 16ರಂದು ಬೆಳಗಾವಿಯಿಂದ ಟ್ರಕ್‌ನಲ್ಲಿ ಸುಮಾರು 40 ಟನ್‌ಗಳಷ್ಟು ಮರ ತುಂಬಿಕೊಂಡು ಕೋಝಿಕ್ಕೋಡ್ ಮಾರ್ಗ ತೆರಳುತ್ತಿದ್ದರು.
ಈ ದುರ್ಘಟನೆ ಸಂಭವಿಸಿದಾಗ ಆತ ಶಿರೂರು ಬಳಿ ರಾತ್ರಿ ವಿಶ್ರಾಂತಿ ಪಡೆಯುತ್ತಿದ್ದರು ಎಂದು ವರದಿಯಾಗಿದೆ.
ಭೂಕುಸಿತವು ಹೆದ್ದಾರಿಯ ಸುಮಾರು 300 ಮೀಟರ್‌ಗಳನ್ನು ಆವರಿಸಿದ್ದು, ಈ ವೇಳೆ ಲಾರಿಯ ಮೇಲೆ ಗುಡ್ಡ ಕುಸಿದುಬಿದ್ದಿತ್ತು. ಘಟನೆ ನಡೆದಾಗ ಅಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದ ಮತ್ತೋರ್ವ ವ್ಯಕ್ತಿ ಇದನ್ನು ಪೊಲೀಸರ ಗಮನಕ್ಕೆ ತಂದಿದ್ದು, ರಕ್ಷಣಾ ದಳ ಅರ್ಜುನ್ಗಾಗಿ ಕಳೆದ ಏಳು ದಿನಗಳಿಂದ ನಿರಂತರವಾಗಿ ಶೋಧ ಕಾರ್ಯ ನಡೆಸುತ್ತಿದೆ. ಆದ್ರೆ, ಇಲ್ಲಿಯವರೆಗೆ ಅರ್ಜುನ್ ಪತ್ತೆಯಾಗಿಲ್ಲ. ಕಾರ್ಯಾಚರಣೆ ಇನ್ನೂ ವೇಗವಾಗಿ ನಡೆಯಬೇಕೆನ್ನುವ ದೃಷ್ಟಿಯಿಂದ ಹುಡುಕಾಟಕ್ಕೆ ಸಾಥ್ ನೀಡಲು ಕೇರಳದ ಕೋಝಿಕ್ಕೋಡ್ನಿಂದ 30 ಸದಸ್ಯರ ತಂಡ ಆಗಮಿಸಿದ್ದು, ಹುಡುಕಾಟ ತ್ವರಿತಗತಿಯಲ್ಲಿ ಸಾಗುತ್ತಿದೆ.
ಜುಲೈ 19ರ ಶುಕ್ರವಾರದಂದು ಅರ್ಜುನ್ ಫೋನ್ ರಿಂಗಾಗಿತ್ತು ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ. ಈ ಭರವಸೆಯ ಮೇರೆಗೆ ಸೇನೆಯು ಶೀಘ್ರದಲ್ಲೇ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಅರ್ಜುನ್ ಚಲಾಯಿಸುತ್ತಿದ್ದ ಟ್ರಕ್ ಜಿಪಿಎಸ್ ಸಿಗ್ನಲ್ ನೀಡಿದ್ದು, ಇದು ಶೋಧನಾ ಕಾರ್ಯಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ. ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ತಂಡ ಹಾಗೂ ಅಗ್ನಿಶಾಮಕ ಸೇವೆಗಳು ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರೆಸಿದೆ.
ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಇದೀಗ ಮತ್ತೆ ಗುಡ್ಡ ಕುಸಿಯುವ ಭೀತಿ ಎದುರಾಗಿದ್ದು, ಗುಡ್ಡಕ್ಕೆ ತಾಗಿಕೊಂಡಿರುವ ಭಾಗದಿಂದ ಜನರನ್ನು ಬೇರೆಡೆಗೆ ಸ್ಥಳಾಂತರಿಸುವಲ್ಲಿ ಜಿಲ್ಲಾಡಳಿತ ವಿಳಂಬ ಮಾಡುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.