ನವದೆಹಲಿ: 'ಕಾಂಗ್ರೆಸ್ ಪಕ್ಷದ ನಾಯಕರು ಕೈಗೊಂಡಿದ್ದ ರಾಜಕೀಯ ತೀರ್ಮಾನಗಳಿಗಾಗಿ ಅವರ ಹತ್ಯೆಯಾಯಿತು' ಎಂಬ ಬಿಜೆಪಿ ಐ.ಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ ಅವರ ಹೇಳಿಕೆಯನ್ನು ಸಾರಾಸಗಟಾಗಿ ತಿರಸ್ಕರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಕಾಂಗ್ರೆಸ್ ಪಕ್ಷ ಆಗ್ರಹಪಡಿಸಿದೆ.
ಅಲ್ಲದೆ, ಈ ಹೇಳಿಕೆಗಾಗಿ ದೇಶದ ಜನರ ಕ್ಷಮೆಯಾಚಿಸಬೇಕು ಹಾಗೂ ಮಾಳವೀಯ ಅವರನ್ನು ಪದಚ್ಯುತಗೊಳಿಸಬೇಕು ಎಂದು ಒತ್ತಾಯಿಸಿದೆ.
ಮಾಳವೀಯ ಅವರು 'ಇಂಡಿಯಾ ಟುಡೆ' ಟಿ.ವಿ. ವಾಹಿನಿಯ ನಿರೂಪಕ ರಾಹುಲ್ ಕನ್ವಲ್ ನಡೆಸಿಕೊಟ್ಟಿದ್ದ ಕಾರ್ಯಕ್ರಮದಲ್ಲಿ ಈ ಹೇಳಿಕೆ ನೀಡಿದ್ದರು. ನಿರೂಪಕ ಈ ಹೇಳಿಕೆಯನ್ನು ಇನ್ನಷ್ಟು ವಿಸ್ತರಿಸಿದ್ದರು ಎಂದು ಆರೋಪಿಸಿದೆ. ಈ ಕಾರಣದಿಂದ ರಾಹುಲ್ ಕನ್ವಲ್ ನಡೆಸಿ ಕೊಡುವ ಕಾರ್ಯಕ್ರಮಗಳಲ್ಲೂ ಭಾಗವಹಿಸದಿರಲು ಕಾಂಗ್ರೆಸ್ ಪಕ್ಷವು ತೀರ್ಮಾನಿಸಿದೆ.
ಈ ಕುರಿತು ನಡ್ಡಾ ಅವರಿಗೆ ಪತ್ರ ಬರೆದಿರುವ ಕಾಂಗ್ರೆಸ್ ಪಕ್ಷವು, ರಾಜೀವ್ ಗಾಂಧಿ ಮತ್ತು ಇಂದಿರಾಗಾಂಧಿ ಅವರ ಹತ್ಯೆ ಕುರಿತ ಈ ಹೇಳಿಕೆಯು ಅಸೂಕ್ಷ್ಮತೆಯದ್ದಾಗಿದೆ ಹಾಗೂ ಇತಿಹಾಸವನ್ನು ತಿರುಚುವ ಯತ್ನವಾಗಿದೆ ಎಂದು ಆರೋಪಿಸಿದೆ.
ಸಂವಾದದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ವಕ್ತಾರರಿಗೆ ಇದಕ್ಕೆ ಉತ್ತರ ನೀಡಲು ಅವಕಾಶ ನೀಡದೇ ನಿರೂಪಕ ಅಡ್ಡಿಪಡಿಸಿದ್ದರು. ಅಲ್ಲದೆ, ಈ ಆಕ್ಷೇಪಾರ್ಹ ಹೇಳಿಕೆಯನ್ನು ನಿರೂಪಕನೇ 'ಎಕ್ಸ್' ಜಾಲತಾಣದ ತನ್ನ ಖಾತೆಯಲ್ಲಿ ಹಂಚಿಕೊಂಡಿದ್ದರು ಎಂದು ಪಕ್ಷದ ಮಾಧ್ಯಮ ವಿಭಾಗದ ಅಧ್ಯಕ್ಷ ಪವನ್ ಖೇರಾ ಅವರು ದೂರಿದ್ದಾರೆ.