ನವದೆಹಲಿ: ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು) 'ಸಂಘಟಿತ ಸೆಕ್ಸ್ ದಂಧೆಯ ಕೂಪ'ವಾಗಿದೆ ಎಂಬ ವರದಿ ಪ್ರಕಟಣೆಗೆ ಸಂಬಂಧಿಸಿದಂತೆ 'ದಿ ವೈರ್' ಆನ್‌ಲೈನ್ ನ್ಯೂಸ್ ಪೋರ್ಟಲ್‌ನ ಸಂಪಾದಕರು ಮತ್ತು ಡೆಪ್ಯುಟಿ ಸಂಪಾದಕರ ವಿರುದ್ಧ ಕ್ರಿಮಿನಲ್ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧೀನ ನ್ಯಾಯಾಲಯ ಜಾರಿಗೊಳಿಸಿದ್ದ ಸಮನ್ಸ್ ಅನ್ನು ರದ್ದುಗೊಳಿಸಿದ್ದ ದೆಹಲಿ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
ಜೆಎನ್‌ಯು ಕಾನೂನು ಮತ್ತು ಆಡಳಿತ ಅಧ್ಯಯನ ಕೇಂದ್ರದ ಮಾಜಿ ಪ್ರಾಧ್ಯಾಪಕರಾದ ಅಮಿತ್ ಸಿಂಗ್ ಅವರು, 2016ರ ಏಪ್ರಿಲ್‌ನಲ್ಲಿ ಪ್ರಕಟಣೆಯಾದ ವರದಿಗೆ ಸಂಬಂಧಿಸಿದಂತೆ 'ದಿ ವೈರ್'ನ ಸಂಪಾದಕರು, ಡೆಪ್ಯುಟಿ ಸಂಪಾದಕರು ಸೇರಿದಂತೆ ಇತರರ ವಿರುದ್ಧ ದೂರು ದಾಖಲಿಸಿದ್ದರು.
ದೆಹಲಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅವರಿಬ್ಬರಿಗೂ ಸಮನ್ಸ್ ಜಾರಿಗೊಳಿಸಿತ್ತು. ಅದನ್ನು ದೆಹಲಿ ಹೈಕೋರ್ಟ್ ರದ್ದುಗೊಳಿಸಿತ್ತು.
ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಎಂ.ಎಂ. ಸುಂದ್ರೇಶ್ ಮತ್ತು ಅರವಿಂದ್ ಕುಮಾರ್ ಅವರನ್ನೊಳಗೊಂಡ ಪೀಠವು, ದೆಹಲಿ ಹೈಕೋರ್ಟ್ ಆದೇಶವನ್ನು ಜುಲೈ 24ರಂದು ರದ್ದುಗೊಳಿಸಿ, ಕಾನೂನು ಪ್ರಕಾರ ಪ್ರಕರಣದ ವಿಚಾರಣೆ ನಡೆಸುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ನಿರ್ದೇಶಿಸಿತು.
ಏನಿದು ಪ್ರಕರಣ: ಜೆಎನ್‌ಯು ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿ 'ಸೆಕ್ಸ್ ದಂಧೆ' ನಡೆಯುತ್ತಿದೆ ಎಂದು ಪ್ರೊ. ಅಮಿತಾ ಸಿಂಗ್ ಅವರನ್ನೊಳಗೊಂಡ ತಂಡವು ವಿಶ್ವವಿದ್ಯಾಲಯದ ಆಡಳಿತಕ್ಕೆ ವರದಿ ಸಲ್ಲಿಸಿದೆ ಎಂದು ಸುಳ್ಳು ಆರೋಪ ಮಾಡಿ 'ದಿ ವೈರ್' ಸುದ್ದಿ ಪ್ರಕಟಿಸಿದೆ ಎಂದು ಆರೋಪಿಸಿ ಸಿಂಗ್ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.