ಕಾಸರಗೋಡು: ಜಿಲ್ಲಾ ಮಟ್ಟದ ಸ್ವಾತಂತ್ರ‍್ಯೋತ್ಸವ ಪಥಸಂಚಲನದ ಸಿದ್ಧತೆಗಳ ಪರಿಶೀಲನಾ ಸಭೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜರುಗಿತು. ಎಂಡೋಸಲ್ಫಾನ್ ಸೆಲ್ ಸಹಾಯಕ ಜಿಲ್ಲಾಧಿಕಾರಿ ಪಿ.ಸುರ್ಜಿತ್ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾನಗರ ಮುನ್ಸಿಪಲ್ ಕ್ರೀಡಾಂಗಣದಲ್ಲಿ ಪೊಲೀಸ್, ಅಬಕಾರಿ, ಎನ್‌ಸಿಸಿ, ಸ್ಕೌಟ್, ರೆಡ್‌ಕ್ರಾಸ್ ಮುಂತಾದ ವಿವಿಧ ಪ್ಲಟೂನ್‌ಗಳಿಂದ ನಡೆಯಲಿರುವ ಪರೇಡ್ ಬಗ್ಗೆ ಸಮಾಲೋಚನೆ ನಡೆಸಲಾಯಿತು ಆಗಸ್ಟ್ ೧೨ ಮತ್ತು ೧೩ ಪೆರೇಡ್ ಪೂರ್ವಭಾವಿ ಕವಾಯತು ನಡೆಸಲು ತೀರ್ಮಾನಿಸಲಾಯಿತು. ಸ್ವಾತಂತ್ರ‍್ಯೋತ್ಸವ ಸಮಾರಂಭದಲ್ಲಿ ಜಿಲ್ಲೆಯ ಸ್ವಾತಂತ್ರ‍್ಯ ಹೋರಾಟಗಾರರು ಅತಿಥಿಗಳಾಗಿ ಭಾಗವಹಿಸುವರು. ಜಿಲ್ಲಾ ಪಂಚಾಯಿತಿ, ನಗರಸಭೆ, ಕಂದಾಯ, ಲೋಕೋಪಯೋಗಿ ರಸ್ತೆ, ಸೇತುವೆ ವಿಭಾಗ, ಜಿಲ್ಲಾ ಸರಬರಾಜು ಕಚೇರಿ, ಪೊಲೀಸ್, ಅಬಕಾರಿ, ಶಿಕ್ಷಣ, ಆರೋಗ್ಯ, ಜಲ ಪ್ರಾಧಿಕಾರ, ಸೈನಿಕ ಕಲ್ಯಾಣ ಮುಂತಾದ ವಿವಿಧ ಇಲಾಖೆಗಳು ಕಾರ್ಯಕ್ರಮಕ್ಕೆ ಸಹಕಾರ ನೀಡಲಿದೆ, ಪಥಸಂಚಲನದಲ್ಲಿ ಅತ್ಯುತ್ತಮ ಕವಯತು ನೀಡುವ ಪ್ಲಟೂನ್‌ಗಳಿಗೆ ರೋಲಿಂಗ್ ಟ್ರೋಫಿ ನೀಡಲಾಗುವುದು. ಪಥಂಚಲನದ ನಂತರ ಜಿಲ್ಲೆಯ ಎರಡು ಶೈಕ್ಷಣಿಕ ಜಿಲ್ಲೆಗಳ ವಿದ್ಯಾರ್ಥಿಗಳು ಪ್ರಸ್ತುತಪಡಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಪ್ತಭಾಷಾ ಸಂಗಮ ಭೂಮಿ ಪರಿಕಲ್ಪನೆಯನ್ನು ಒಳಗೊಂಡ ಕಾರ್ಯಕ್ರಮವೂ ನಡೆಯಲಿರುವುದಾಗಿ ಪಿ. ಸುರ್ಜಿತ್ ಮಾಹಿತಿ ನೀಡಿದರು. ವಿವಿಧ ಇಲಾಖೆ ಸಿಬ್ಬಂದಿ, ತಹಸೀಲ್ದಾರ್ ಮೊದಲಾದವರು ಭಾಗವಹಿಸಿದ್ದರು.