ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತಿನ ಉಕ್ಕಿನಡ್ಕದಲ್ಲಿರುವ ಸರ್ಕಾರಿ ಸ್ಥಳಗಳನ್ನು ಗ್ರಾಮಾಧಿಕಾರಿ ಲಂಚದ ಅಮಿಷದಿಂದ ಅನರ್ಹರ ಹೆಸರಿನಲ್ಲಿ ದಾಖಲೆ ತಯಾರಿ ನೀಡುತ್ತಿರುವ ಬಗ್ಗೆ ಮಂಜೇಶ್ವರ ತಾಲೂಕಿನ ಲ್ಯಾಂಡ್ ಅಸೈನಮೆಂಟ್ ಸಭೆಯಲ್ಲಿ ಸ್ಥಳದ ಪಲಾನುಭವಿಗಳು ಮುತ್ತಿಗೆ ಹಾಕಿ ಪ್ರತಿಭಟಿಸಿದ ಸುದ್ದಿ ಮಾಧ್ಯಮಗಳಲ್ಲಿ ಪ್ರಚುರವಾಗುತ್ತಿದ್ದಂತೆ ಇದೀಗ ಉಪ ತಹಶೀಲ್ದಾರರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿರುವುದಾಗಿ ವರದಿಯಾಗಿದೆ.
ಕಳೆದ ಹಲವಾರು ವರ್ಷಗಳಿಂದ ಉಕ್ಕಿನಡ್ಕದಲ್ಲಿರುವ ಸರ್ಕಾರಿ ಸ್ಥಳಕ್ಕೆ ಅರ್ಜಿ ಹಾಕಿ ಬಳಿಕ ಸ್ಥಳದಲ್ಲಿಯೇ ಗುಡಿಸಲು ಕಟ್ಟಿ ವಾಸಿಸುವ ಹಲವು ಬಡ ಕುಟುಂಬಗಳ ಪ್ರಕರಣ ಹೈಕೋರ್ಟ್ ಮೆಟ್ಟಲೇರಿದ್ದು ಇದೀಗ ವಿಚಾರಣಾ ಹಂತ ಪೂರ್ತಿಗೊಳ್ಳುವ ನಡುವೆಯೇ ಬಡವರಿಗೆ ಸೇರಬೇಕಾಗಿದ್ದ ಇಲ್ಲಿನ ಸ್ಥಳಗಳನ್ನು ಸಾವಿರಾರು ರೂ ಲಂಚ ಪಡೆದು ಸ್ಥಳೀಯ ಗ್ರಾಮಾಧಿಕಾರಿ ಅನರ್ಹರಿಗೆ ವಿತರಿಸುತ್ತಿದ್ದಾರೆಂದು ಆರೋಪಿಸಿ ಫಲಾನುಭವಿಗಳು ಉಪ್ಪಳದಲ್ಲಿ ಲ್ಯಾಂಡ್ ಅಸೈನಮೆಂಟ್ ಸಭೆಗೆ ಮುತ್ತಿಗೆ ಹಾಕಿದ್ದರು. ಈ ವೇಳೆ ಮಂಜೇಶ್ವರ ಶಾಸಕರ ಸಹಿತ ಸ್ಥಳದಲ್ಲಿದ್ದ ಜನಪ್ರತಿನಿಧಿಗಳು ಈ ಬಗ್ಗೆ ಶೀಘ್ರ ಕ್ರಮಕೈಗೊಳ್ಳುವಂತೆ ಸಭೆಯಲ್ಲಿ ಸೂಚನೆ ನೀಡಿದ್ದು ಇದೀಗ ಗುರುವಾರ ಮಂಜೇಶ್ಚರದ ಉಪ ತಹಶಿಲ್ದಾರ್ ಶ್ರೀಜಿತ್ ,ಪೆರ್ಲ ವಿಲೇಜ್ ಆಫೀಸರ್ ಹಮೀದ್ ಮತ್ತು ತಂಡ ಸ್ಥಳ ಪರಿಶೀಲನೆಗೈದಿತ್ತು. ಹೈಕೋರ್ಟ್ ಆದೇಶ ಲಭಿಸುವವರೆಗೆ ವಿವಾದಿತ ಸ್ಥಳದಲ್ಲಿ ಭೂಮಿ ಹಂಚಿಕೆಯನ್ಬು ತಡೆ ಹಿಡಿಯುವಂತೆ ಎಣ್ಮಕಜೆ ಪಂಚಾಯತು ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಸಮ್ಮುಖದಲ್ಲಿ ತೀರ್ಮಾನ ಕೈಗೊಂಡಿರುವುದಾಗಿ ತಿಳಿದು ಬಂದಿದೆ.