ಅಹ್ಮದಾಬಾದ್: ಲೋಕಸಭೆಯಲ್ಲಿ ರಾಹುಲ್ ಗಾಂಧಿ ಹಿಂದೂಗಳ ಬಗ್ಗೆ ನೀಡಿದ್ದ ಹೇಳಿಕೆ ವಿರುದ್ಧ ಗುಜರಾತ್ ನಲ್ಲಿ ವಿಹೆಚ್ ಪಿ ಹಾಗೂ ಬಜರಂಗ ದಳ ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.
ಅಹ್ಮದಾಬಾದ್ ನಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿಯನ್ನು ಗುರಿಯಾಗಿರಿಸಿಕೊಂಡು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳ ಪ್ರತಿಭಟನೆ ನಡೆಸಿದವು.
ಜೈ ಶ್ರೀರಾಮ್ ಘೋಷಣೆ ಕೂಗಿದ ಪ್ರತಿಭಟನಾ ನಿರತರು ರಾಹುಲ್ ಗಾಂಧಿ ಪೋಸ್ಟರ್, ಫೋಟೋಗಳ ಮೇಲೆ ಕಪ್ಪು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದರು. ಈ ಪ್ರತಿಭಟನೆ ವೇಳೆ ಕಚೇರಿ ಕಟ್ಟಡದ ಕಾವಲುಗಾರನ ಗರ್ಭಿಣಿ ಮಗಳ ಮೇಲೂ ದಾಳಿಕೋರರು ಹಲ್ಲೆ ನಡೆಸಿದ್ದಾರೆ. ದಾಳಿಯ ಸಂದರ್ಭದಲ್ಲಿ ಕಾಂಗ್ರೆಸ್ ಕಟ್ಟಡದ ವಾಚ್‌ಮ್ಯಾನ್ ಇದ್ದರು ಮತ್ತು ಅವರ ಗರ್ಭಿಣಿ ಮಗಳ ಮೇಲೂ ಈ ಗೂಂಡಾಗಳು ಹಲ್ಲೆ ನಡೆಸಿದ್ದಾರೆ. ಅಂತಹವರನ್ನು ಹಿಂದೂಗಳೆಂದು ಎಂದಿಗೂ ಕರೆಯಲು ಸಾಧ್ಯವಿಲ್ಲ. ಈ ಅಂಶಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಾವು ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್ ನಾಯಕ ಅಮಿತ್ ಚಾವ್ಡಾ ಹೇಳಿದ್ದಾರೆ.
ಈ ದಾಳಿಯನ್ನು ಹೇಡಿತನ ಎಂದು ಖಂಡಿಸಿದ ಚಾವ್ಡಾ, "ಕಳೆದ ರಾತ್ರಿ ಆಡಳಿತಾರೂಢ ಬಿಜೆಪಿ ಮತ್ತು ವಿಎಚ್‌ಪಿಯ ಪುಂಡರು ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ನಿಜವಾದ ಹಿಂದೂ ಯಾರನ್ನೂ ಬೆದರಿಸುವುದಿಲ್ಲ, ಕತ್ತಲೆಯ ಮರೆಯಲ್ಲಿ ಮಧ್ಯರಾತ್ರಿ ದಾಳಿ ಮಾಡುವುದು ಹೇಡಿತನ ಎಂದು ಹೇಳಿದ್ದಾರೆ.
ದಾಳಿಯ ನಂತರ ಬಿಜೆಪಿ ಕಾರ್ಯಕರ್ತರು ಮಂಗಳವಾರ ಕಾಂಗ್ರೆಸ್ ಕಚೇರಿಗೆ ಹಿಂತಿರುಗಿ ಪ್ರತಿಭಟನೆ ನಡೆಸಿದರು. ಎರಡು ಕಡೆ ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿಗರು ಮತ್ತು ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ವಾತಾವರಣವು ಉದ್ವಿಗ್ನಗೊಂಡಿತು. ಬಿಜೆಪಿ ಕಾರ್ಯಕರ್ತರು ಜೈ ಶ್ರೀ ರಾಮ್ ಎಂದು ಘೋಷಣೆ ಕೂಗುತ್ತಾ ಕಲ್ಲು ಮತ್ತು ಗಾಜಿನ ಬಾಟಲಿಗಳನ್ನು ಎಸೆಯಲು ಆರಂಭಿಸಿದರು. ಕಾಂಗ್ರೆಸ್ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದರು. ಕಲ್ಲು ತೂರಾಟದಿಂದ ಓರ್ವ ಪೊಲೀಸ್ ಗಾಯಗೊಂಡಿದ್ದು, 108 ತುರ್ತು ಸೇವೆಯ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ. ಪ್ರತಿಭಟನೆಯ ವೇಳೆ ಪೊಲೀಸರು ಗೂಂಡಾಗಳನ್ನು ರಕ್ಷಿಸಿದ್ದಾರೆ ಮತ್ತು ಕಾಂಗ್ರೆಸ್ ಕಾರ್ಯಕರ್ತರನ್ನು ಕಚೇರಿಗೆ ನುಗ್ಗಿ ಬಲವಂತವಾಗಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಚಾವ್ಡಾ ಆರೋಪಿಸಿದ್ದಾರೆ.