ಕೋಝಿಕ್ಕೋಡ್: ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರೂರು ಬಳಿ ಸಂಭವಿಸಿದ ಭಾರಿ ಭೂಕುಸಿತದಲ್ಲಿ ಸಿಲುಕಿದ್ದ ಕೇರಳದ ಲಾರಿ ಚಾಲಕ ಅರ್ಜುನ್ ನಾಪತ್ತೆಯಾಗಿ ಐದು ದಿನ ಕಳೆದಿದ್ದು, ಅವರ ಕುಟುಂಬ ರಕ್ಷಣಾ ಕಾರ್ಯಾಚರಣೆಯಲ್ಲಿ ನಂಬಿಕೆ ಕಳೆದುಕೊಂಡಿದ್ದು, ಅವರನ್ನು ಹುಡುಕಲು ಸೇನೆ ನಿಯೋಜಿಸುವಂತೆ ಶನಿವಾರ ಕೋರಿದೆ.
ತಮ್ಮ ನಿವಾಸದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕುಟುಂಬಸ್ಥರು, ರಕ್ಷಣಾ ಕಾರ್ಯಕ್ಕಾಗಿ ಸೇನೆ ನಿಯೋಜಿಸುವಂತೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಪ್ರವಾಸೋದ್ಯಮ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಇಮೇಲ್ ಕಳುಹಿಸಿರುವುದಾಗಿ ತಿಳಿಸಿದರು. ಅರ್ಜುನ್ ಪತ್ತೆ ಕಾರ್ಯಾಚರಣೆಯಲ್ಲಿ ನೆರವಾಗಲು ಕೇರಳದಿಂದ ರಕ್ಷಣಾ ತಂಡ ತೆರಳಲು ಕರ್ನಾಟಕ ಸರ್ಕಾರ ಅನುಮತಿ ನೀಡುವಂತೆ ಕುಟುಂಬ ಮತ್ತೊಂದು ಪ್ರಸ್ತಾಪ ಮಾಡಿದೆ.
ಕರ್ನಾಟಕದವರು ರಕ್ಷಣಾ ಕಾರ್ಯಾಚರಣೆಯನ್ನು ಸರಿಯಾಗಿ ಮಾಡಲು ಸಾಧ್ಯವಾಗದಿದ್ದರೆ, ಅದನ್ನು ಸೇನೆ ಮಾಡಲಿ ಅಥವಾ ಕೇರಳದ ಜನರು ಅಲ್ಲಿಗೆ ಹೋಗಿ ಮಾಡಲಿ, ಕೇರಳದವರು ಸಲಕರಣೆ ಹೊಂದಿದ್ದು ಅಲ್ಲಿಗೆ ಹೋಗಿ ರಕ್ಷಣೆ ಮಾಡಲು ಸಿದ್ಧರಿದ್ದಾರೆ ಎಂದು ಅವರ ಕುಟುಂಬದವರು ಹೇಳಿದ್ದಾರೆ. ಕರ್ನಾಟಕದವರ ಮೇಲೆ ಮೊದಲು ನಂಬಿಕೆ ಇತ್ತು. ಹೀಗಾಗಿ ಮೌನದಿಂದ ಕಾಯುತ್ತಿದ್ದೇವು. ಆದರೆ, ಅವರ ರಕ್ಷಣಾ ಕಾರ್ಯಾಚರಣೆಯನ್ನು ವಿಳಂಬ ಮಾಡುತ್ತಿದ್ದಾರೆ. ಅವರಲ್ಲಿ ನಂಬಿಕೆ ಕಳೆದುಕೊಂಡಿದ್ದೇವೆ. ಆದ್ದರಿಂದ ನಾವು ಪ್ರಧಾನಿ ನರೇಂದ್ರ ಮೋದಿ ಜಿ, ಸುರೇಶ್ ಗೋಪಿ ಸರ್ ಮತ್ತು ಕೇರಳ ಮುಖ್ಯಮಂತ್ರಿಗಳಿಗೆ ಇಮೇಲ್ ಮಾಡಿದ್ದೇವೆ ಎಂದು ಎಂದು ಅರ್ಜುನ್ ಅವರ ತಾಯಿ ಹಾಗೂ ತಂಗಿ ಹೇಳಿದರು.
ಇದಕ್ಕೂ ಮುನ್ನಾ ಮಾತನಾಡಿದ ಅರ್ಜುನ್ ಅವರ ಸಹೋದರಿ, ನಾಪತ್ತೆ ವಿಷಯವನ್ನು ಕರ್ನಾಟಕ ಪೊಲೀಸರು ಜುಲೈ 16 ರಂದು ತಿಳಿಸಿದರು. ನಂತರ ಲಾರಿಯ ಜಿಪಿಎಸ್ ಸ್ಥಳ ಸೇರಿದಂತೆ ಹೆಚ್ಚಿನ ವಿವರಗಳನ್ನ ತಿಳಿಸಲಾಯಿತು. ಆದರೆ ಅರ್ಜನ್ ಎಲ್ಲಿದ್ದಾರೆ ಎಂಬುದರ ಬಗ್ಗೆ ಇಲ್ಲಿಯವರೆಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಇಷ್ಟು ವಿಳಂಬವಾದರೆ, ನಾವು ಯಾವ ಭರವಸೆ ಇಟ್ಟುಕೊಳ್ಳಬೇಕು. ಅಲ್ಲಿ ಅವರಿಗೆ ಅಗತ್ಯ ಸೌಲಭ್ಯಗಳಿಲ್ಲದಿದ್ದರೆ. ಎಲ್ಲಿ ಲಭ್ಯವಿದೆಯೋ ಅಲ್ಲಿಂದ ತರಬೇಕಿತ್ತು ಎಂದು ಹೇಳಿದರು.
ಕೇರಳ ಸರ್ಕಾರ ಮತ್ತು ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳ ಪರಿಣಾಮಕಾರಿ ಮಧ್ಯಪ್ರವೇಶದ ನಂತರ ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತಗೊಳಿಸಲಾಗಿದೆ. ಕೇರಳದ ಮೋಟಾರು ವಾಹನ ಇಲಾಖೆಯ ಅಧಿಕಾರಿಗಳ ತಂಡವಲ್ಲದೆ, ರಾಜ್ಯದ ಪೊಲೀಸ್ ತಂಡವೂ ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ಉಪಸ್ಥಿತರಿದ್ದು, ರಕ್ಷಣಾ ಕಾರ್ಯಗಳ ಸ್ಥಿತಿಯ ಬಗ್ಗೆ ನಿಯಮಿತವಾಗಿ ವರದಿಗಳನ್ನು ನೀಡುತ್ತಿದೆ ಎಂದು ಬೆಳಿಗ್ಗೆ ಕುಟುಂಬಸ್ಥರನ್ನು ಭೇಟಿ ಮಾಡಿದ ಕೇರಳ ಅರಣ್ಯ ಸಚಿವ ಎ ಕೆ ಸಸೀಂದ್ರನ್ ಸುದ್ದಿಗಾರರಿಗೆ ತಿಳಿಸಿದರು. ರಕ್ಷಣಾ ಕಾರ್ಯಗಳಿಗೆ ನೆರವಾಗಲು ನೆಲಕ್ಕೆ ನುಗ್ಗುವ ರಾಡಾರ್ ಮತ್ತು ಲೋಹ ಶೋಧಕಗಳಂತಹ ಉಪಕರಣಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ ಎಂದು ಸಚಿವರು ಹೇಳಿದರು.
ಈ ಮಧ್ಯೆ ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್ ಮಾತನಾಡಿ, ರಕ್ಷಣಾ ಕಾರ್ಯಗಳನ್ನು ಕರ್ನಾಟಕ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಮಳೆಯಿಂದಾಗಿ ಮತ್ತಷ್ಟು ಭೂಕುಸಿತ ಸಂಭವಿಸುವ ಅಪಾಯವಿದ್ದು, ಪ್ರತಿಕೂಲ ಹವಾಮಾನವು ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ. ಕರ್ನಾಟಕ ಸರ್ಕಾರದ ಕಡೆಯಿಂದ ಯಾವುದೇ ಪ್ರಯತ್ನದ ಕೊರತೆ ಇಲ್ಲ ಎಂದರು.
ಶುಕ್ರವಾರ ಅರ್ಜುನ್ ಅವರ ಫೋನ್ ರಿಂಗ್ ಆಗುತಿತ್ತು .ಲಾರಿಯ ಜಿಪಿಎಸ್ ಟ್ರಾಕ್ಟರ್ ಸಿಗ್ನಲ್ ಸಿಗುತಿತ್ತು ಎಂದು ಅವರ ಕುಟುಂಬ ಹೇಳಿತ್ತು. ಈ ವಿಚಾರವಾಗಿ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಕುಟುಂಬದ ಪ್ರಕಾರ, ಸೋಮವಾರ ಅರ್ಜುನ್‌ನೊಂದಿಗೆ ಕೊನೆಯದಾಗಿ ಮಾತನಾಡಿದ್ದಾರೆ, ನಂತರ ಯಾವುದೇ ಸಂಪರ್ಕ ಸಿಕ್ಕಿಲ್ಲ. ಜುಲೈ 16 ರಂದು ಸಂಭವಿಸಿದ ಭೂಕುಸಿತ ಘಟನೆಯ ನಂತರ ಆರು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಭೂಕುಸಿತದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.