ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್‌ಗೆ (ಎಲ್‌ಜಿ) ಹೆಚ್ಚಿನ ಅಧಿಕಾರವನ್ನು ನೀಡುವ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರವು ತೆಗೆದುಕೊಂಡಿದೆ. ಸರ್ಕಾರದ ಈ ಕ್ರಮವು ವಿರೋಧ ಪಕ್ಷಗಳ ತೀವ್ರ ಟೀಕೆಗೆ ಗುರಿಯಾಗಿದೆ.
ಪೊಲೀಸ್ ಇಲಾಖೆ, ಐಎಎಸ್ ಮತ್ತು ಐಪಿಎಸ್‌ನಂತಹ ಅಖಿಲ ಭಾರತ ಸೇವೆಗಳ ಅಧಿಕಾರಿಗಳಿಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವು ಲೆಫ್ಟಿನೆಂಟ್ ಗವರ್ನರ್‌ಗೆ ಲಭಿಸಿದೆ.
ಅಡ್ವೊಕೇಟ್ ಜನರಲ್ ಮತ್ತು ಇತರ ಕಾನೂನು ಅಧಿಕಾರಿಗಳ ನೇಮಕಾತಿ ಕುರಿತ ತೀರ್ಮಾನಗಳು ಹಾಗೂ ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ ಸಂಬಂಧಿಸಿದ ವಿಷಯಗಳನ್ನು ಇನ್ನು ಮುಂದೆ ಎಲ್‌ಜಿ ಅವರೇ ತೆಗೆದುಕೊಳ್ಳಲಿದ್ದಾರೆ.
ಲೆಫ್ಟಿನೆಂಟ್ ಗವರ್ವರ್‌ಗೆ ಹೆಚ್ಚಿನ ಅಧಿಕಾರವನ್ನು ನೀಡಲು ಕೇಂದ್ರ ಗೃಹ ಸಚಿವಾಲಯವು ಜಮ್ಮು ಮತ್ತು ಕಾಶ್ಮೀರ ಪುನರ್ವಿಂಗಡನೆ ಕಾಯ್ದೆ-2019ಕ್ಕೆ ಶುಕ್ರವಾರ ಕೆಲವೊಂದು ತಿದ್ದುಪಡಿ ತಂದಿದೆ. ಜಮ್ಮು ಮತ್ತು ಕಾಶ್ಮೀರವನ್ನು, ಲಡಾಕ್ ಮತ್ತು ಜಮ್ಮು- ಕಾಶ್ಮೀರ ಎನ್ನುವ ಎರಡು ನೂತನ ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲು ಈ ಕಾಯ್ದೆಯನ್ನು ಜಾರಿಗೊಳಿಸಲಾಗಿತ್ತು.
ಕಾಯ್ದೆಗೆ ಮಾಡಿರುವ ತಿದ್ದುಪಡಿಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮೋದನೆ ನೀಡಿದ್ದು, ಜುಲೈ 12 ರಿಂದ ಜಾರಿಗೆ ಬಂದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ ಎಂದು ವಿಶ್ಲೇಷಿಸಲಾಗಿದೆ.
ಹೊಸ ತಿದ್ದುಪಡಿ ಕಾನೂನಿನ ಪ್ರಕಾರ 'ಪೊಲೀಸ್', 'ಸಾರ್ವಜನಿಕ ವ್ಯವಸ್ಥೆ, 'ಅಖಿಲ ಭಾರತ ಸೇವೆ' ಮತ್ತು 'ಭ್ರಷ್ಟಾಚಾರ ನಿಗ್ರಹ ದಳ'ಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಹಣಕಾಸು ಇಲಾಖೆಯ ಒಪ್ಪಿಗೆಯ ಅಗತ್ಯವಿರುವ ಪ್ರಸ್ತಾವನೆಗಳನ್ನು ಅಂತಿಮ ಅನುಮೋದನೆ ಅಥವಾ ನಿರಾಕರಣೆಗೆ ಮುಖ್ಯ ಕಾರ್ಯದರ್ಶಿಗಳ ಮೂಲಕ ಲೆಫ್ಟಿನೆಂಟ್ ಗವರ್ನರ್‌ಗೆ ಸಲ್ಲಿಸಬೇಕಿದೆ.
ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿರುವ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಉಪಾಧ್ಯಕ್ಷರೂ ಆಗಿರುವ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, 'ಜಮ್ಮು ಮತ್ತು ಕಾಶ್ಮೀರವು ದುರ್ಬಲ ಮುಖ್ಯಮಂತ್ರಿಯನ್ನು ಹೊಂದುವುದು ಇಷ್ಟವಿಲ್ಲ' ಎಂದಿದ್ದಾರೆ.
'ವಿಧಾನಸಭಾ ಚುನಾವಣೆಯು ಸನಿಹದಲ್ಲಿದೆ ಎಂಬುದರ ಸೂಚನೆ ಇದಾಗಿದೆ. ಜಮ್ಮು ಕಾಶ್ಮೀರದ ಜನರು ದುರ್ಬಲ, ತನ್ನ ಗುಮಾಸ್ತನ ನೇಮಕಕ್ಕೂ ಎಲ್‌ಜಿಯ ಮೊರೆ ಹೋಗಬೇಕಾದ ರಬ್ಬರ್ ಸ್ಟಾಂಪ್ ಸಿ.ಎಂಗಿಂತ ಉತ್ತಮ ಸಿ.ಎಂ ಅನ್ನು ಪಡೆಯುವುದಕ್ಕೆ ಅರ್ಹರಾಗಿದ್ದಾರೆ' ಎಂದು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
-ಇಲ್ತಿಜಾ ಮುಫ್ತಿ, ಪಿಡಿಪಿ ಮಾಧ್ಯಮ ಸಲಹೆಗಾರ್ತಿಕಾಶ್ಮೀರಿಗಳ ಮೇಲಿನ ತನ್ನ ಬಿಗಿ ಹಿಡಿತವನ್ನು ಬಿಟ್ಟುಕೊಡಲು ಬಿಜೆಪಿ ಬಯಸುತ್ತಿಲ್ಲ. ಕಾಶ್ಮೀರದ ಮುಂದಿನ ಸರ್ಕಾರವನ್ನು ದುರ್ಬಗೊಳಿಸುವುದೇ ಇದರ ಉದ್ದೇಶ.ಪ್ರಮುಖ ಅಂಶಗಳು* ಐಎಎಸ್ ಐಪಿಎಸ್ ಅಧಿಕಾರಿಗಳ ನೇಮಕ ಮತ್ತು ವರ್ಗಾವಣೆಗೆ ಸಂಬಂಧಿಸಿದಂತೆ ಇನ್ನು ಮುಂದೆ ಲೆಫ್ಟಿನೆಂಟ್ ಗವರ್ನರ್ ಅಂತಿಮ ತೀರ್ಮಾನ ತೆಗೆದುಕೊಳ್ಳುವರು.
* ಜಮ್ಮು ಮತ್ತು ಕಾಶ್ಮೀರ ಪುನರ್ವಿಂಗಡನೆ ಕಾಯ್ದೆ-2019ಕ್ಕೆ ಹೊಸದಾಗಿ 42ಎ ಮತ್ತು 42ಬಿ ನಿಯಮಗಳ ಸೇರ್ಪಡೆ.
* ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಅನುಮತಿ ನೀಡುವುದು ಆಥವಾ ಮೇಲ್ಮನವಿ ಸಲ್ಲಿಸುವ ಕುರಿತ ಯಾವುದೇ ಪ್ರಸ್ತಾವನೆಯನ್ನು ಕಾನೂನು ನ್ಯಾಯ ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಯ ಮುಖ್ಯ ಕಾರ್ಯದರ್ಶಿ ಮೂಲಕ ಎಲ್‌ಜಿ ಮುಂದೆ ಸಲ್ಲಿಸಬೇಕಾಗುತ್ತದೆ.
* ಕಾರಾಗೃಹಗಳು ಪ್ರಾಸಿಕ್ಯೂಷನ್ ನಿರ್ದೇಶನಾಲಯ ಮತ್ತು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಸಂಬಂಧಿಸಿದ ವಿಷಯಗಳನ್ನು ಗೃಹ ಇಲಾಖೆಯ ಕಾರ್ಯದರ್ಶಿಯು ಮುಖ್ಯ ಕಾರ್ಯದರ್ಶಿ ಮೂಲಕ ಲೆಫ್ಟಿನೆಂಟ್ ಗವರ್ನರ್‌ಗೆ ಸಲ್ಲಿಸಬೇಕು.
ರಾಜ್ಯದ ಸ್ಥಾನಮಾನ ಸದ್ಯಕ್ಕಿಲ್ಲ: ಕಾಂಗ್ರೆಸ್
ಕೇಂದ್ರ ಸರ್ಕಾರವು ಲೆಫ್ಟಿನೆಂಟ್ ಗವರ್ನರ್‌ಗೆ ಹೆಚ್ಚಿನ ಅಧಿಕಾರ ನೀಡಿರುವುದು ಜಮ್ಮು ಮತ್ತು ಕಾಶ್ಮೀರಕ್ಕೆ ಪೂರ್ಣ ಪ್ರಮಾಣದಲ್ಲಿ ರಾಜ್ಯದ ಸ್ಥಾನಮಾನ ಸದ್ಯಕ್ಕೆ ಸಿಗದು ಎಂಬುದರ ಸೂಚನೆಯಾಗಿದೆ ಎಂದು ಕಾಂಗ್ರೆಸ್ ಶನಿವಾರ ಹೇಳಿದೆ.
'ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಮತ್ತೆ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. 2024ರ ಸೆಪ್ಟೆಂಬರ್ 30ರ ಒಳಗಾಗಿ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಚುನಾವಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಇದರ ನಡುವೆಯೇ ಕೇಂದ್ರ ಗೃಹ ಸಚಿವಾಲಯವು ಕಾಯ್ದೆಗೆ ತಿದ್ದುಪಡಿ ತಂದು ಲೆಫ್ಟಿನೆಂಟ್ ಗವರ್ನರ್ ಅವರಿಗೆ ಹೆಚ್ಚಿನ ಅಧಿಕಾರ ನೀಡಿದೆ' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಟೀಕಿಸಿದ್ದಾರೆ.