ಜಮ್ಮು: ಜಮ್ಮು ಮತ್ತು ಕಾಶ್ಮೀರದ ಡೋಡಾ ಜಿಲ್ಲೆಯಲ್ಲಿ ಉಗ್ರರೊಂದಿಗಿನ ಕಾಳಗದಲ್ಲಿ ಹುತಾತ್ಮರಾದ ಯೋಧರ ಪರ ಕಂಬನಿ ಮಿಡಿದಿರುವ ಸ್ಥಳೀಯರು, ಉಗ್ರರ ಅಟ್ಟಹಾಸವನ್ನು ಖಂಡಿಸಿ ಹಲವೆಡೆ ಪ್ರತಿಭಟನೆ ನಡೆಸಿದ್ದಾರೆ. ಜತೆಗೆ ಸರ್ಕಾರದ ಪ್ರತಿಕ್ರಿಯೆಗೆ ಆಗ್ರಹಿಸಿ 'ಆಪರೇಷನ್ ಆಲ್ ಔಟ್' ಎನ್ನುವ ಅಭಿಯಾನವನ್ನು ಆರಂಭಿಸಿದ್ದಾರೆ.
ರಾಷ್ಟ್ರೀಯ ಬಜರಂಗದಳದ ಮುಖ್ಯಸ್ಥ ರಾಕೇಶ್ ಕುಮಾರ್ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಯೋಧರ ಹತ್ಯೆ ಮತ್ತು ಪಾಕಿಸ್ತಾನಕ್ಕೆ ನೀಡುತ್ತಿರುವ ಬೆಂಬಲದ ವಿರುದ್ಧ ಕಿಡಿಕಾರಿದರು. ಪ್ರತಿಕೃತಿಗಳನ್ನು ಸುಟ್ಟು, ಪಾಕಿಸ್ತಾನವನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು.
'ಈ ರೀತಿಯ ಹೇಡಿಗಳ ಕೃತ್ಯವನ್ನು ನಾವು ಖಂಡಿಸುತ್ತೇವೆ. ದೇಶದ ಸೇನೆ ಮತ್ತು ನಾಗರಿಕರನ್ನು ಗುರಿಯಾಗಿಸುತ್ತಿರುವ ವಿದೇಶಿ ಕೂಲಿಕಾರ್ಮಿಕರನ್ನು ಹೊರಹಾಕಬೇಕು. ಸರ್ಕಾರ 'ಆಪರೇಷನ್ ಆಲ್ ಔಟ್' ಕಾರ್ಯಾಚರಣೆಯನ್ನು ಕೈಗೊಳ್ಳಬೇಕು' ಎಂದು ಆಗ್ರಹಿಸಿದರು.
ಡೋಡಾ ಜಿಲ್ಲೆಯ ದೇಸಾ ಅರಣ್ಯ ಪ್ರದೇಶದಲ್ಲಿ ಸೋಮವಾರ ತಡರಾತ್ರಿ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಮೇಜರ್ ಬ್ರಿಜೇಶ್ ಥಾಪಾ, ಒಬ್ಬ ಪೊಲೀಸ್ ಸೇರಿದಂತೆ ನಾಲ್ವರು ಸೇನೆಯ ಸಿಬ್ಬಂದಿ ಹುತಾತ್ಮರಾಗಿದ್ದರು.
ಸಿಪಾಯಿಗಳಾದ ಬಿಜೇಂದ್ರ, ಅಜಯಕುಮಾರ್ ಸಿಂಗ್ ಮತ್ತು ದೊಕ್ಕರಿ ರಾಜೇಶ್ ಹುತಾತ್ಮರಾದ ಯೋಧರು. '10 ರಾಷ್ಟ್ರೀಯ ರೈಫಲ್ಸ್'ನ ಮೇಜರ್ ಥಾಪಾ, ಇತ್ತೀಚೆಗಷ್ಟೆ ಬಡ್ತಿ ಹೊಂದಿದ್ದರು.