ಕೊಲ್ಕತ್ತ: ಅಲ್ಪಸಂಖ್ಯಾತ ಸಮುದಾಯದ ಬೆಂಬಲದ ಕೊರತೆಯಿಂದಾಗಿ ಪಶ್ಚಿಮ ಬಂಗಾಳದಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕಳಪೆ ಪ್ರದರ್ಶನ ನೀಡಿದ್ದರ ಬಗ್ಗೆ ಮಾತನಾಡಿದ ಪಕ್ಷದ ಹಿರಿಯ ನಾಯಕ ಸುವೇಂದು ಅಧಿಕಾರಿ, 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಎನ್ನುವುದು ಅನಗತ್ಯ.
ಬಿಜೆಪಿಯ ರಾಜ್ಯ ಕಾರ್ಯಕಾರಿ ಸಮಿತಿಯ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, 'ನಾನು ರಾಷ್ಟ್ರೀಯವಾದಿ ಮುಸ್ಲಿಮರ ಪರವಾಗಿಯೂ ಮಾತನಾಡುತ್ತಿದ್ದೇನೆ. ನಾವೆಲ್ಲರೂ ಸಬ್ ಕಾ ಸಾಥ್- ಸಬ್ ಕಾ ವಿಕಾಸ್ ಎನ್ನುತ್ತೇವೆ. ಆದರೆ ಇನ್ನು ಮುಂದೆ ನಾನು ಅದನ್ನು ಹೇಳುವುದಿಲ್ಲ. ನಮ್ಮೊಂದಿಗೆ ಇರುವವರೊಂದಿಗೆ ನಾವು ಇರುತ್ತೇವೆ. ಅಲ್ಪಸಂಖ್ಯಾತ ಮೋರ್ಚಾದ ಅಗತ್ಯವೂ ಇಲ್ಲ' ಎಂದರು.
ಪಶ್ಚಿಮ ಬಂಗಾಳ ಮತದಾರರಲ್ಲಿ ಶೇ 30ರಷ್ಟು ಜನ ಅಲ್ಪಸಂಖ್ಯಾತರಿದ್ದಾರೆ.
ಲೋಕಸಭಾ ಚುನಾವಣೆ ವೇಳೆಯಲ್ಲಿ ಹಲವು ಪ್ರದೇಶಗಳಲ್ಲಿ ಟಿಎಂಸಿಯ ಜಿಹಾದಿ ಗೂಂಡಾಗಳು ಹಿಂದೂಗಳಿಗೆ ಮತದಾನ ಮಾಡಲು ಅವಕಾಶ ನೀಡಲಿಲ್ಲ ಎಂದು ಸುವೇಂದು ದೂರಿದ್ದಾರೆ.
'ಪಶ್ಚಿಮ ಬಂಗಾಳದಲ್ಲಿ ಪಾರದರ್ಶಕ ಚುನಾವಣೆ ಸಾಧ್ಯವಿಲ್ಲ. ಅದಕ್ಕೆ ಟಿಎಂಸಿಯ ಜಿಹಾದಿ ಗೂಂಡಾಗಳು ಅವಕಾಶ ನೀಡುವುದಿಲ್ಲ. ರಾಜ್ಯದಲ್ಲಿ ಡಿಸ್ಟರ್ಬ್ಡ್ ಏರಿಯಾಸ್ ಆಯಕ್ಟ್ (ಗಲಭೆಪೀಡಿತ ಪ್ರದೇಶಗಳಲ್ಲಿ ದಾಖಲಾದ ಪ್ರಕರಣಗಳ ತ್ವರಿತಗತಿಯ ಪರಿಹಾರಕ್ಕೆ ತಂದ ಕಾನೂನು) ಜಾರಿ ಮಾಡಿದರೆ ಮಾತ್ರ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಯಲು ಸಾಧ್ಯ. ಹಿಂಬಾಗಿಲ ಮೂಲಕ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಿ ರಾಜ್ಯದಲ್ಲಿ ಅಧಿಕಾರ ಹಿಡಿಯುವುದು ನಮಗೆ ಇಷ್ಟವಿಲ್ಲ' ಎಂದರು.