ಕೊಚ್ಚಿ: ಭಾರೀ ಮಳೆಯಿಂದಾಗಿ ರಾಜ್ಯದ ಪ್ರವಾಸೋದ್ಯಮ ಕೇಂದ್ರಗಳನ್ನು ಮುಚ್ಚಲಾಗಿದೆ. ವಯನಾಡಿನಲ್ಲಿ ಭೂಕುಸಿತದ ಅನಾಹುತ ಹಾಗೂ ಉತ್ತರ ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಕ್ರಮಕೈಗೊಳ್ಳಲಾಗಿದೆ.
ಗುಡ್ಡಗಾಡು ಪ್ರದೇಶಗಳಲ್ಲಿ ಭೂಕುಸಿತ ಮುಂದುವರಿದಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿನ ಅಣೆಕಟ್ಟುಗಳು ತೆರೆದ ನಂತರ ನದಿಗಳು ತುಂಬಿ ಹರಿಯುತ್ತಿವೆ. ಜನರು ಸುರಕ್ಷಿತ ಸ್ಥಳಗಳಿಗೆ ತೆರಳಲು ಮತ್ತು ಸಾಧ್ಯವಾದಷ್ಟು ಪ್ರಯಾಣವನ್ನು ತಪ್ಪಿಸುವಂತೆ ಸೂಚಿಸಲಾಗಿದೆ.
ರಕ್ಷಣಾ ಕಾರ್ಯಾಚರಣೆಗಾಗಿ ವಯನಾಡಿನ ವಿಪತ್ತು ಪ್ರದೇಶಗಳಿಗೆ ಭೂ, ವಾಯು ಮತ್ತು ನೌಕಾ ಪಡೆಗಳನ್ನು ನಿಯೋಜಿಸಲಾಗಿದೆ. ಎಜಿಮಲದಿಂದ ನೌಕಾಪಡೆ ತಂಡ ದುರಂತದ ಪ್ರದೇಶವನ್ನು ತಲುಪಿದೆ. ವಯನಾಡಿನ ಮುಂಡಕೈ, ಅಕಮಲ ಮತ್ತು ಚುರಲ್ಮಲಾ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿದೆ. ಭೂಕುಸಿತದಿಂದ ನೂರಾರು ಮನೆಗಳು ಕೊಚ್ಚಿ ಹೋಗಿವೆ. ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಈಗಾಗಲೇ ೫೦ ಸಾವುಗಳು ದೃಢಪಟ್ಟಿವೆ. ರಕ್ಷಣಾ ಕಾರ್ಯಾಚರಣೆ ಅತ್ಯಂತ ಕಷ್ಟಕರವಾಗಿ ಮುಂದುವರಿದಿದೆ.
ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಜಲ ಆಯೋಗ ಎಚ್ಚರಿಕೆ ನೀಡಿದೆ. ಎರ್ನಾಕುಳಂ ಜಿಲ್ಲೆಯ ಕಲಿಯಾರ್, ತ್ರಿಶೂರ್ ಜಿಲ್ಲೆಯ ಕಿಚೇರಿ, ಪಾಲಕ್ಕಾಡ್ ಜಿಲ್ಲೆಯ ಕೂಲಂತೋಡ್ ಮತ್ತು ಕೋಝಿಕೋಡ್ ಜಿಲ್ಲೆಯ ಕುಟ್ಯಾಡಿ ಜಿಲ್ಲೆಗಳಲ್ಲಿ ಕೇಂದ್ರ ಜಲ ಆಯೋಗವು ಆರೆಂಜ್ ಅಲರ್ಟ್ ಘೋಷಿಸಿದೆ. ಮಳೆ ಮತ್ತು ಅನಾಹುತದಿಂದಾಗಿ ರಾಜ್ಯದಲ್ಲಿ ಸುಮಾರು ೧೦ ರೈಲು ಸೇವೆಗಳನ್ನು ನಿರ್ಬಂಧಿಸಲಾಗಿದೆ.