ಉತ್ತರಪ್ರದೇಶ: ಹಲವು ದಿನಗಳಿಂದ ಅಪೆಂಡಿಕ್ಸ್ ಖಾಯಿಲೆಯಿಂದ ತೀವ್ರ ಬಳಲುತ್ತಿದ್ದ ಮಹಿಳಾ ರೋಗಿಯೊಬ್ಬರು ನೋವು ತಾಳಲಾರದೆ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಆಕೆಗೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರ ತಂಡ, ಮಹಿಳೆ ಶೀಘ್ರವೇ ಗುಣಮುಖರಾಗುತ್ತಾರೆ ಎಂದು ಕುಟುಂಬಸ್ಥರಿಗೆ ಭರವಸೆ ಕೊಟ್ಟು ಮನೆಗೆ ಕಳುಹಿಸಿದ್ದಾರೆ.
ಆದರೆ, ಚೇತರಿಸಿಕೊಂಡು ಮುಂಚಿನಂತೆ ಎದ್ದು ಓಡಾಡಬೇಕಿದ್ದ ರೋಗಿ, ಅದಕ್ಕಿಂತ ಹೆಚ್ಚಿನ ಸಂಕಟವನ್ನು ಅನುಭವಿಸಿದ ಬೆನ್ನಲ್ಲೇ ಆಕೆಯನ್ನು ಬೇರೆ ಆಸ್ಪತ್ರೆಗೆ ದಾಖಲಿಸಿದಾಗ ಬೆಚ್ಚಿಬೀಳಿಸುವ ಸಂಗತಿಯೊಂದು ಹೊರಬಿದ್ದಿದೆ. ಈ ಘಟನೆ ಉತ್ತರಪ್ರದೇಶದ ಹಾಪುರದಲ್ಲಿ ವರದಿಯಾಗಿದೆ.
ಆಪರೇಷನ್ ಆದ ಬಳಿಕವೂ ತೀವ್ರ ಹೊಟ್ಟೆ ನೋವಿನಿಂದ ಬಳಲಿದ ಮಹಿಳೆಯನ್ನು ಕುಟುಂಬಸ್ಥರು ಅನುಮಾನಗೊಂಡು ಬೇರೆ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ಈ ವೇಳೆ ರೋಗಿಯ ಹೊಟ್ಟೆ ಸ್ಕ್ಯಾನ್ ಮಾಡಿದಾಗ ಅದರೊಳಗೆ ಹತ್ತಿ ಮತ್ತು ಬ್ಯಾಂಡೇಜ್ ಇರುವುದು ಪತ್ತೆಯಾಗಿದೆ. ತಕ್ಷಣವೇ ವೈದ್ಯರು ಇನ್ನೂ ನಿರ್ಲಕ್ಷ್ಯ ಮಾಡಿದರೆ ಮಹಿಳೆ ಜೀವಕ್ಕೆ ಆಪತ್ತು ಎಂದು ತಿಳಿಸಿದ್ದಾರೆ. ಈ ವಿಷಯ ಹೊರಬೀಳುತ್ತಿದ್ದಂತೆ ಎಡವಟ್ಟು ಮಾಡಿದ್ದ ವೈದ್ಯರು ಏಕಾಏಕಿ ಪರಾರಿಯಾಗಿದ್ದಾರೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಆಸ್ಪತ್ರೆಯ ಹೊರಗೆ ಪ್ರತಿಭಟನೆ ನಡೆಸಿ, ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ.
ರೈಲ್ವೆ ರಸ್ತೆಯಲ್ಲಿರುವ ನಿರಾಶ್ರಯ್ ಸೇವಾ ಸಮಿತಿಯ ಸದಸ್ಯ ಟಿಂಕು ಎಂಬುವವರು ಕಳೆದ 20 ದಿನಗಳ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ಪತ್ನಿ ಪೂನಂ ಅವರನ್ನು ಹೆಚ್ಚಿನ ಚಿಕಿತ್ಸೆಗೆಂದು ವೆಲ್ ನೆಸ್ ಆಸ್ಪತ್ರೆಗೆ ದಾಖಲಿಸಿದ್ದರು.
ವೈದ್ಯರು ಆಕೆ ಅಪೆಂಡಿಸೈಟಿಸ್ ಕಾಯಿಲೆಯಿಂದ ಬಳಲುತ್ತಿದ್ದು, ಶಸ್ತ್ರಚಿಕಿತ್ಸೆಗೆ ಮಾಡಬೇಕು ಎಂದು ಶಿಫಾರಸು ಮಾಡಿದರು. ಅದರಂತೆಯೇ ನಾವು ಆಪರೇಷನ್ ಮಾಡಿಸಿದ್ದೆವು. ಆದ್ರೆ, ಈಗ ಈ ವಿಷಯ ನಮಗೆ ತಿಳಿಯಿತು ಎಂದು ಟಿಂಕು ವಿವರಿಸಿದ್ದಾರೆ. ಸದ್ಯ ಹೊಸ ವೈದ್ಯರ ತಂಡ, ಮಹಿಳೆಯ ಹೊಟ್ಟೆಯೊಳಗಿದ್ದ ವೈದ್ಯಕೀಯ ವಸ್ತುಗಳನ್ನು ಯಶಸ್ವಿಯಾಗಿ ಹೊರತೆಗೆದಿದ್ದು, ಸೂಕ್ತ ಚಿಕಿತ್ಸೆ ನೀಡಿ, ಆಕೆಯ ಆರೋಗ್ಯವನ್ನು ಸುಧಾರಿಸಿದ್ದಾರೆ.