ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಶೂಟರ್ ಮನು ಭಾಕರ್ ಕಂಚಿನ ಪದಕ ಗೆದ್ದಿದ್ದಾರೆ. ಪದಕ ಗೆದ್ದ ಭಾಕರ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ಕೇಂದ್ರ ಗೃಹಸಚಿವ ಅಮಿತ್ ಶಾ, ಶೂಟರ್ ಅಭಿನವ್ ಬಿಂದ್ರಾ ಸೇರಿದಂತೆ ಹಲವರು ಅಭಿನಂದನೆ ತಿಳಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, 'ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದಕ್ಕಾಗಿ ಮನು ಭಾಕರ್ ಅವರಿಗೆ ಅಭಿನಂದನೆಗಳು. ಇದು ಐತಿಹಾಸಿಕ ಗೆಲುವಾಗಿದೆ. ಅಲ್ಲದೇ ಶೂಟಿಂಗ್‌ನಲ್ಲಿ ಪದಕ ಗೆದ್ದ ಭಾರತ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಭಾಕರ್ ಅವರು ಪಾತ್ರರಾಗಿದ್ದಾರೆ' ಎಂದು ಹೇಳಿದ್ದಾರೆ.
'ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿರುವ ಮನು ಭಾಕರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಭಾರತವು ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ. ಶೂಟಿಂಗ್‌ನಲ್ಲಿ ಪದಕ ಗೆದ್ದ ದೇಶದ ಮೊದಲ ಮಹಿಳೆಯೂ ನೀವಾಗಿದ್ದಿರಿ. ನಿಮ್ಮ ಸಾಧನೆಯು ಅನೇಕ ಕ್ರೀಡಾಪಟುಗಳಿಗೆ ವಿಶೇಷವಾಗಿ ಮಹಿಳೆಯರಿಗೆ ಸ್ಪೂರ್ತಿ ನೀಡಲಿದೆ' ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮನು ಭಾಕರ್ ಅವರಿಗೆ ಅಭಿನಂದನೆ ತಿಳಿಸಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಗೃಹಸಚಿವ ಅಮಿತ್ ಶಾ, 'ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಮನು ಭಾಕರ್ ಅವರಿಗೆ ಅಭಿನಂದನೆಗಳು. ನಿಮ್ಮ ಗೆಲುವು ಇಡೀ ದೇಶದಲ್ಲಿ ಸಂಭ್ರಮವನ್ನುಂಟು ಮಾಡಿದೆ. ನಿಮ್ಮ ಸಾಧನೆಗೆ ಇಡೀ ರಾಷ್ಟ್ರವೇ ಹೆಮ್ಮೆ ಪಡುತ್ತಿದೆ' ಎಂದಿದ್ದಾರೆ.
'ನಿಮ್ಮ ಸಮರ್ಪಣಾ ಭಾವ, ಕಠಿಣ ಪರಿಶ್ರಮ ಮತ್ತು ಉತ್ಸಾಹವೂ ಇದೀಗ ಫಲ ನೀಡಿದೆ. ಈ ಸಾಧನೆಯು ನಿಮ್ಮ ಪರಿಶ್ರಮ ಮತ್ತು ಸಂಕಲ್ಪಕ್ಕೆ ಸಾಕ್ಷಿಯಾಗಿದೆ. ನಿಮಗೆ ತುಂಬು ಹೃದಯದ ಅಭಿನಂದನೆಗಳು' ಎಂದು ಶೂಟರ್ ಅಭಿನವ್ ಬಿಂದ್ರಾ ಹೇಳಿದ್ದಾರೆ.