ಕೋಯಿಕ್ಕೋಡ್: 'ಮನ್ ಕಿ ಬಾತ್' ರೆಡಿಯೊ ಕಾರ್ಯಕ್ರಮದ 111ನೇ ಸಂಚಿಕೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಕೇರಳದಲ್ಲಿ ಬುಡಕಟ್ಟು ಮಹಿಳೆಯರು ತಯಾರಿಸುವ 'ಕಾರ್ತುಂಬಿ' ಕೊಡೆ ಬಗ್ಗೆ ಪ್ರಸ್ತಾಪಿಸಿದ್ದಾರೆ. 'ಕಾರ್ತುಂಬಿ ಕೊಡೆಗಳನ್ನು ಕೇರಳದಲ್ಲಿ ತಯಾರಿಸಲಾಗುತ್ತದೆ.
ಕೇರಳದ ಸಂಸ್ಕೃತಿಯಲ್ಲಿ ಕೊಡೆಗಳಿಗೆ ಅವುಗಳದೇ ಆದ ಮಹತ್ವವಿದೆ. ಕೊಡೆಗಳು ಅಲ್ಲಿನ ಅನೇಕ ಸಂಪ್ರದಾಯಗಳು ಮತ್ತು ಆಚರಣೆಗಳ ಪ್ರಮುಖ ಭಾಗವಾಗಿದೆ. ನಾನು ಹೇಳುತ್ತಿರುವ ಈ ಕಾರ್ತುಂಬಿ ಕೊಡೆಗಳನ್ನು ಕೇರಳದ ಅಟ್ಟಪ್ಪಾಡಿಯಲ್ಲಿ ತಯಾರಿಸಲಾಗುತ್ತದೆ. ಕೇರಳದ ಬುಡಕಟ್ಟು ಮಹಿಳೆಯರು ಇದನ್ನು ತಯಾರಿಸುತ್ತಾರೆ. ಮಾರುಕಟ್ಟೆಯಲ್ಲಿ ಈ ಕೊಡೆಗಳಿಗೆ ಅಪಾರ ಬೇಡಿಕೆಯಿದೆ' ಎಂದು ಮೋದಿ ಅವರು ಹೇಳಿದ್ದಾರೆ.
ಬುಡಕಟ್ಟು ಕುಟುಂಬಗಳಿಗೆ ಸಾಮಾಜಿಕ ಭದ್ರತೆಯನ್ನು ಕಲ್ಪಿಸುವ ಉದ್ದೇಶದಿಂದ ಕಾರ್ತುಂಬಿ ಕೊಡೆ ಉದ್ಯಮವನ್ನು ಪ್ರಾರಂಭಿಸಲಾಗಿತ್ತು. 2017ರಲ್ಲಿ ಅಂದಿನ ಪರಿಶಿಷ್ಟ ಜಾತಿ ಮತ್ತು ಪಂಗಡ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಎ.ಕೆ.ಬಾಲನ್ ಅವರು ಅಟ್ಟಪಾಡಿಯಲ್ಲಿ ಬುಡಕಟ್ಟು ಮಹಿಳೆಯರ ಈ ಉದ್ಯಮಕ್ಕೆ ಚಾಲನೆ ನೀಡಿದ್ದರು.
ಪ್ರಾರಂಭದಲ್ಲಿ ಸುಮಾರು 50ರಿಂದ 60 ಮಹಿಳೆಯರು ಕಾರ್ತುಂಬಿ ಕೊಡೆ ತಯಾರಿಸುವಲ್ಲಿ ಕೈಜೋಡಿಸಿದ್ದರು. ಇದೀಗ ಈ ಕೊಡೆಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದ್ದು, ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. 'ವಟ್ಟಲಕ್ಕಿ ಕೋಆಪರೇಟಿವ್ ಫಾರ್ಮಿಂಗ್ ಸೊಸೈಟಿ' ಉದ್ಯಮದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದೆ.
ಪ್ರಧಾನಿ ಅವರು 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಈ ಕೊಡೆ ಪ್ರಸ್ತಾಪಿಸಿದ ಬೆನ್ನಲ್ಲೇ ಕೇಂದ್ರ ಸಚಿವ ಜಾರ್ಜ್ ಕುರಿಯನ್ ಅವರು ರಾಜ್ಯದ ಅಟ್ಟಪ್ಪಾಡಿಯ ಬುಡಕಟ್ಟು ಮಹಿಳೆಯರು ತಯಾರಿಸಿದ ಕಾರ್ತುಂಬಿ ಕೊಡೆಗಳನ್ನು ಖರೀದಿಸುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.