HEALTH TIPS

ಯುರೋಪ್‌ನಲ್ಲಿ ಕ್ಷಿಪಣಿ ನಿಯೋಜನೆ; ಅಮೆರಿಕ, ರಷ್ಯಾ ಮಧ್ಯೆ ಮತ್ತೆ ಕಲಹ?

 ಮೆರಿಕ ಮತ್ತು ರಷ್ಯಾ ಎರಡೂ ಜಗತ್ತಿನ ಪ್ರಬಲ ರಾಷ್ಟ್ರಗಳು. ಅದಕ್ಕಿಂತಲೂ ಹೆಚ್ಚಾಗಿ ಭಾರಿ ಶಸ್ತ್ರಾಸ್ತ್ರ ಹೊಂದಿರುವಂಥವು. ನಿಶ್ಶಸ್ತ್ರೀಕರಣದ ಒಪ್ಪಂದಕ್ಕೆ ಬದ್ಧವಾಗಿ ಹಲವು ವರ್ಷ ಸಂಯಮದಿಂದ ಇದ್ದ ಎರಡೂ ರಾಷ್ಟ್ರಗಳು ಈಗ ಬಹಿರಂಗವಾಗಿ ಶಸ್ತ್ರಾಸ್ತ್ರ ತಯಾರಿಕೆ ಹಾಗೂ ನಿಯೋಜನೆಯಲ್ಲಿ ಪೈಪೋಟಿಗಿಳಿದಿವೆ.

ಪರಸ್ಪರ ದೂಷಿಸುತ್ತಾ, ಅಣ್ವಸ್ತ್ರಗಳ ಸ್ಪರ್ಧೆಯಲ್ಲಿ ತೊಡಗಿರುವ ಈ ಎರಡು ರಾಷ್ಟ್ರಗಳ ವರ್ತನೆ ಜಾಗತಿಕ ಮಟ್ಟದಲ್ಲಿ ಆತಂಕಕ್ಕೆ ಕಾರಣವಾಗಿದೆ...

ಜರ್ಮನಿ ಸೇರಿದಂತೆ ಯುರೋಪ್‌ನ ರಾಷ್ಟ್ರಗಳಲ್ಲಿ ಕ್ಷಿಪಣಿಗಳನ್ನು ನಿಯೋಜಿಸಲು ಅಮೆರಿಕ ಮುಂದಾಗಿರುವುದು ರಷ್ಯಾವನ್ನು ಕೆರಳಿಸಿದೆ. ಒಂದು ವೇಳೆ ಅಮೆರಿಕ ಕ್ಷಿಪಣಿಗಳನ್ನು ನಿಯೋಜಿಸಿದರೆ, ಮಧ್ಯಮ ಶ್ರೇಣಿ ಅಣ್ವಸ್ತ್ರ ಕ್ಷಿಪಣಿ ತಯಾರಿಕೆಯನ್ನು ಮತ್ತೆ ಆರಂಭಿಸುವುದಾಗಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಎಚ್ಚರಿಸಿದ್ದಾರೆ.

ಮೂರು ದಶಕಗಳ ಹಿಂದೆ ಎರಡೂ ರಾಷ್ಟ್ರಗಳು ಒಪ್ಪಂದ ಮಾಡಿಕೊಂಡು ಯುರೋಪ್‌ನಲ್ಲಿ ಅಲ್ಪ ಮತ್ತು ಮಧ್ಯಮ ಶ್ರೇಣಿಯ ಕ್ಷಿಪಣಿಗಳನ್ನು ನಿಯೋಜಿಸುವುದನ್ನು ಸ್ಥಗಿತಗೊಳಿಸಿದ್ದವು. ಅವುಗಳ ತಯಾರಿಕೆಯನ್ನೂ ಕೈಬಿಟ್ಟಿದ್ದವು. ರಷ್ಯಾವು ಉಕ್ರೇನ್‌ ಮೇಲೆ ಯುದ್ಧ ಆರಂಭಿಸಿದ ನಂತರ ಎರಡೂ ರಾಷ್ಟ್ರಗಳ ನಡುವೆ ಶಸ್ತ್ರಾಸ್ತ್ರ ಪೈಪೋಟಿ ಹೆಚ್ಚಾಗಿದ್ದು, 35 ವರ್ಷಗಳ ಹಿಂದೆ ಬಳಕೆ ನಿಲ್ಲಿಸಿದ್ದ ಕ್ಷಿಪಣಿಗಳ ತಯಾರಿಕೆೆಗೆ ಮುಂದಾಗಿವೆ.

ಭೂಮಿಯಿಂದ ಉಡಾಯಿಸುವ ಅಲ್ಪ ಮತ್ತು ಮಧ್ಯಮ ಶ್ರೇಣಿಯ ಪರಮಾಣು ಅಸ್ತ್ರಗಳ ಮತ್ತು ಸಾಂಪ್ರದಾಯಿಕ ಶಸ್ತ್ರಾಸ್ತ್ರ (500 ಕಿ.ಮೀ ವ್ಯಾಪ್ತಿಯಿಂದ 5,500 ಕಿ.ಮೀ. ವ್ಯಾಪ್ತಿಯವರೆಗೆ) ನಿಯಂತ್ರಣ ಒಪ್ಪಂದಕ್ಕೆ (ಮಧ್ಯಮ ಶ್ರೇಣಿ ಪರಮಾಣು ಶಸ್ತ್ರಾಸ್ತ್ರ ಒಪ್ಪಂದ-ಐಎನ್‌ಎಫ್‌) ಅಮೆರಿಕ ಮತ್ತು ರಷ್ಯಾ 1987ರಲ್ಲಿ ಸಹಿ ಹಾಕಿದ್ದವು.

'ಶಾಂತಿಯ ಗಿಡ ನೆಡುವುದಕ್ಕೆ ಹೆಮ್ಮೆಯೆನಿಸುತ್ತದೆ. ಇದು ಮುಂದೊಂದು ದಿನ ದೊಡ್ಡ ಮರವಾಗಿ ಬೆಳೆಯಲಿದೆ' ಎಂದು ಸೋವಿಯತ್ ರಷ್ಯಾದ ನಾಯಕ ಮಿಖಾಯಿಲ್ ಗೊರ್ಬಚೆವ್ ಅಮೆರಿಕದ ಅಧ್ಯಕ್ಷ ರೊನಾಲ್ಡ್ ರೇಗನ್ ಅವರಿಗೆ ಒಪ್ಪಂದದ ಸಂದರ್ಭದಲ್ಲಿ ಹೇಳಿದ್ದರು.

ಒಪ್ಪಂದ 2019ರವರೆಗೆ ಚಾಲ್ತಿಯಲ್ಲಿತ್ತು. ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿದ್ದಾಗ ಒಪ್ಪಂದವನ್ನು ಉಲ್ಲಂಘಿಸಿದರು. ರಷ್ಯಾ ಕೂಡ ಒಪ್ಪಂದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಿದೆ ಎಂದು ಟ್ರಂಪ್ ಹೇಳಿದ್ದರು. ನ್ಯಾಟೊ ಕೂಟದ ಮಿತ್ರರಾಷ್ಟ್ರಗಳು ಕೂಡ ರಷ್ಯಾ ಒಪ್ಪಂದ ಉಲ್ಲಂಘಿಸಿದೆ ಎಂದೇ ಭಾವಿಸಿವೆ ಎಂದು ಅಮೆರಿಕ ಹೇಳಿತ್ತು. ಇದನ್ನು ರಷ್ಯಾ ನಿರಾಕರಿಸಿತ್ತು. ಒಪ್ಪಂದ ಮುರಿದು ಬಿದ್ದುದರ ಪರಿಣಾಮಗಳು ಈಗ ಪೂರ್ಣಪ್ರಮಾಣದಲ್ಲಿ ಕಾಣಿಸಿಕೊಳ್ಳಲಾರಂಭಿಸಿವೆ.

'ಅಲ್ಪದೂರದ ಮತ್ತು ಮಧ್ಯಮ ಶ್ರೇಣಿಯ ನೆಲದಿಂದ ಉಡಾಯಿಸುವ ಕ್ಷಿಪಣಿಗಳ ತಯಾರಿಕೆಯನ್ನು ರಷ್ಯಾ ಮತ್ತೆ ಆರಂಭಿಸಲಿದೆ' ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸಾರ್ವಜನಿಕವಾಗಿ ಘೋಷಿಸಿದ್ದಾರೆ. ಆದರೆ, ರಷ್ಯಾ ಈಗಾಗಲೇ ಕ್ಷಿಪಣಿ ತಯಾರಿಕೆಯನ್ನು ಆರಂಭಿಸಿದ್ದು, ಅಗತ್ಯ ಬಿದ್ದರೆ ಎಲ್ಲಿ ನಿಯೋಜನೆ ಮಾಡಬೇಕು ಎನ್ನುವುದರ ಬಗ್ಗೆ ಪರಿಶೀಲಿಸುತ್ತಿದೆ ಎಂದು ಪಶ್ಚಿಮದ ರಾಷ್ಟ್ರಗಳು ಅನುಮಾನ ವ್ಯಕ್ತಪಡಿಸಿವೆ. ರಕ್ಷಣಾ ತಜ್ಞರು ಹೇಳುವಂತೆ, ರಷ್ಯಾದ ಈ ಕ್ಷಿಪಣಿಗಳು ಸಾಂಪ್ರದಾಯಿಕ ಹಾಗೂ ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿವೆ.

ಇನ್ನೊಂದೆಡೆ, ಅಮೆರಿಕ ಕೂಡ ಇಂಥದ್ದೇ ಚಟುವಟಿಕೆಗಳಲ್ಲಿ ತೊಡಗಿದೆ. ಎಸ್‌ಎಮ್‌-6, ಟೊಮಾಹಾಕ್ಸ್ (ಈ ಹಿಂದೆ ಹಡಗುಗಳಲ್ಲಿ ಇಡುತ್ತಿದ್ದರು) ಮತ್ತು ಹೊಸ ಹೈಪರ್‌ಸಾನಿಕ್ ಕ್ಷಿಪಣಿಗಳನ್ನು 2026ರಿಂದ ತಾನು ಜರ್ಮನಿಯಲ್ಲಿ ನಿಯೋಜನೆ ಮಾಡುವುದಾಗಿ ಅಮೆರಿಕ ಜೂನ್ 10ರಂದು ಹೇಳಿದೆ.

ರಷ್ಯಾ -ಉಕ್ರೇನ್ ಯುದ್ಧದ ಕಾರಣದಿಂದ ಒಂದು ರೀತಿಯ ಉದ್ವಿಗ್ನ ವಾತಾವರಣ ಇದೆ. ಹೊಸ ಶಸ್ತ್ರಾಸ್ತ್ರ ತಯಾರಿಕೆ ಮತ್ತು ನಿಯೋಜನೆಯೊಂದಿಗೆ ಅದು ಈಗ ಮತ್ತಷ್ಟು ಹೆಚ್ಚಾಗಲಿದೆ. ರಷ್ಯಾ ಮತ್ತು ಅಮೆರಿಕ ತಮ್ಮ ಶಸ್ತ್ರಾಸ್ತ್ರ ಸಾಮರ್ಥ್ಯವನ್ನು ಉತ್ತಮಪಡಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿವೆ. ರಾಜಕೀಯವಾಗಿ ಇರಬಹುದು, ಸೇನಾ ವಿಚಾರದಲ್ಲಿರಬಹುದು, ಇಬ್ಬರ ಪೈಕಿ ಯಾರಾದರೊಬ್ಬರು ಒಂದು ಹೆಜ್ಜೆ ಮುಂದೆ ಇಟ್ಟರೆ, ಅದರಿಂದ ಆಕ್ರೋಶಗೊಂಡು ಮತ್ತೊಬ್ಬರು ಕೂಡ ಮುಂದಡಿ ಇಡುವಂಥ ಒತ್ತಡದ ಸ್ಥಿತಿ ನಿರ್ಮಾಣವಾಗುತ್ತದೆ.

'ಶಸ್ತ್ರಾಸ್ತ್ರದ ಯೋಜಿತ ನಿಯೋಜನೆಯು ರಷ್ಯಾ ಮತ್ತು ನ್ಯಾಟೊ ರಾಷ್ಟ್ರಗಳ ನಡುವೆ ನೇರ ಸೇನಾ ಮುಖಾಮುಖಿಯ ಸನ್ನಿವೇಶವನ್ನು ಸೃಷ್ಟಿಸುತ್ತದೆ. ಅದರಿಂದ ಉಕ್ರೇನ್‌ಗಾಗಿ ಪಶ್ಚಿಮದ ಆಯುಧಗಳನ್ನು ಸಂಗ್ರಹಿಸಲಾಗಿರುವ ಪೋಲೆಂಡ್‌ನ ನೆಲೆ ಮೇಲೆ ರಷ್ಯಾವು ದಾಳಿ ಮಾಡಬಹುದಾದ ಅಥವಾ ರಷ್ಯಾದ ರೇಡಾರ್/ಹತೋಟಿ ಕೇಂದ್ರದ ಮೇಲೆ ಅಮೆರಿಕ ದಾಳಿ ನಡೆಸುವಂಥ ಸಂದರ್ಭದ ಸೃಷ್ಟಿಗೆ ಕಾರಣವಾಗಬಹುದು' ಎನ್ನುವುದು ವಿಶ್ವಸಂಸ್ಥೆಯ ನಿಶ್ಶಸ್ತ್ರೀಕರಣ ಸಂಶೋಧನಾ ಸಂಸ್ಥೆಯಲ್ಲಿ ಹಿರಿಯ ಸಂಶೋಧಕರಾಗಿರುವ ಆಂಡ್ರೆ ಬಕ್ಲಿತ್‌ಸ್ಕಿ ಅವರ ಅಭಿಪ್ರಾಯ.

ಸಮುದ್ರ ಅಥವಾ ವಾಯು ನೆಲೆಯಿಂದ ಉಡಾಯಿಸುವ ಕ್ಷಿಪಣಿಗಳ ಮೂಲಕ ದಾಳಿ ಮಾಡುವ ಸಾಮರ್ಥ್ಯವನ್ನು ಎರಡೂ ದೇಶಗಳು ಈಗಾಗಲೇ ಹೊಂದಿವೆ. ಅವುಗಳ ಜತೆಗೆ ನೆಲದ ಮೇಲಿಂದಲೇ ಉಡಾಯಿಸುವ ಕ್ಷಿಪಣಿಗಳೂ ಸೇರಿದರೆ, ದಾಳಿಯ ಸಾಧ್ಯತೆಗಳು ಹೆಚ್ಚಿಸುವುದಲ್ಲದೇ, ಶತ್ರುವಿನ ಪ್ರತಿರೋಧವನ್ನು ಎದುರಿಸುವ ಶಕ್ತಿಯನ್ನೂ ನೀಡುತ್ತದೆ. ಜತೆಗೆ, ಅಮೆರಿಕ ಜರ್ಮನಿಯಲ್ಲಿ ಕ್ಷಿಪಣಿಗಳನ್ನು ಇರಿಸುವುದು ತನ್ನ ಯುರೋಪ್‌ ಮಿತ್ರರಿಗೆ ಸೂಚನೆ ನೀಡಿದಂತೆ. ಇದರಿಂದ ಬಿಗುವಿನ ವಾತಾವರಣ ಹೆಚ್ಚಾಗಿ, ಮುಂದೆ ಪರಿಸ್ಥಿತಿ ಕೈ ಮೀರಬಹುದು ಎನ್ನುವ ಆತಂಕ ವ್ಯಕ್ತವಾಗಿದೆ.

ಅಮೆರಿಕ ಈ ರೀತಿ ಕ್ಷಿಪಣಿಗಳನ್ನು ಇರಿಸುವ ಮೂಲಕ ರಷ್ಯಾದ ನಿಯಂತ್ರಣ ಕೇಂದ್ರಗಳು, ರಕ್ಷಣಾ ನೆಲೆಗಳ ಮೇಲೆ ಗುರಿ ಇಟ್ಟ ಭಾವನೆ ಉಂಟಾಗಲು ಕಾರಣವಾಗುತ್ತದೆ. ಇದರಿಂದ ರಷ್ಯಾ ಕೂಡ ಅಮೆರಿಕವನ್ನು ಗುರಿ ಮಾಡಿ ಹೆಚ್ಚು ಕ್ಷಿಪಣಿಗಳನ್ನು ಇರಿಸಲು ಮುಂದಾಗಬಹುದು ಎಂದು ಹಂಬರ್ಗ್‌ನ ಶಾಂತಿ ಸಂಶೋಧನೆ ಮತ್ತು ಸುರಕ್ಷಾ ನೀತಿ ಸಂಸ್ಥೆಯ ಶಸ್ತ್ರಾಸ್ತ್ರ ಹತೋಟಿ ತಜ್ಞ ಉಲ್ರಿಚ್ ಕ್ಯೂನ್ ವಿಶ್ಲೇಷಿಸುತ್ತಾರೆ.

ಹೀಗಾದರೆ, ಅದು ವಿಶ್ವದ ಎರಡು ಬಲಿಷ್ಠ ರಾಷ್ಟ್ರಗಳ ನಡುವಿನ ಸಂಘರ್ಷವಾಗಿ ಮಾತ್ರವೇ ಉಳಿಯುವುದಿಲ್ಲ ಎನ್ನುವ ಆತಂಕವನ್ನೂ ಅವರು ವ್ಯಕ್ತಪಡಿಸುತ್ತಾರೆ.

ಒಪ್ಪಂದದ ಹಿಂದೆ ಮುಂದೆ...

ಯುರೋಪ್‌ ರಾಷ್ಟ್ರಗಳಲ್ಲಿ ಮಧ್ಯಮ ಶ್ರೇಣಿಯ ಕ್ಷಿಪಣಿಗಳನ್ನು ನಿಯೋಜಿಸುವ ವಿಚಾರವು ಹಿಂದಿನಿಂದಲೂ ಎರಡೂ ರಾಷ್ಟ್ರಗಳ ನಡುವೆ ಕಿತ್ತಾಟಕ್ಕೆ ಕಾರಣವಾಗುತ್ತಿದೆ. ಶಸ್ತ್ರಾಸ್ತ್ರ ಬಳಕೆಗೆ ಕಡಿವಾಣ ಹಾಕಬೇಕು ಎನ್ನುವ ದಿಸೆಯಲ್ಲಿ 1950ರಿಂದಲೂ ಪ್ರಯತ್ನಗಳು ನಡೆಯುತ್ತಿದ್ದವು. ಆದರೆ, ಯಾವುದೂ ಯಶಸ್ಸು ಕಂಡಿರಲಿಲ್ಲ.

1962ರಲ್ಲಿ ಕ್ಯೂಬಾ ಕ್ಷಿಪಣಿ ಬಿಕ್ಕಟ್ಟಿನ ಸಂದರ್ಭದಲ್ಲಿ ಕೈಗೊಂಡಿದ್ದ ನಿರ್ಣಯದ ಪ್ರಕಾರ, ಅಮೆರಿಕವು ಟರ್ಕಿಯಲ್ಲಿ ನಿಯೋಜಿಸಿದ್ದ ಮಧ್ಯಮ ಶ್ರೇಣಿಯ ಜ್ಯುನಿಪರ್‌ ಕ್ಷಿಪಣಿಗಳನ್ನು ವಾಪಸ್‌ ಪಡೆದರೆ, ಸೋವಿಯತ್‌ ಒಕ್ಕೂಟ ಕ್ಯೂಬಾದಿಂದ ತನ್ನ ಕ್ಷಿಪಣಿಯನ್ನು ತೆರವುಗೊಳಿಸಿತು.

1970ರ ದಶಕದಲ್ಲಿ ಸೋವಿಯತ್‌ ಒಕ್ಕೂಟ ಯುರೋಪ್‌ನಲ್ಲಿ ಎಸ್‌ಎಸ್‌-20 ಮಧ್ಯಮ ಶ್ರೇಣಿ ಕ್ಷಿಪಣಿಗಳನ್ನು ನಿಯೋಜಿಸಿತು. ಈ ಸಂದರ್ಭದಲ್ಲಿ ಪಶ್ಚಿಮ ಯುರೋಪ್‌ನ ಮಿತ್ರ ರಾಷ್ಟ್ರಗಳ ಸಹಾಯಕ್ಕೆ ನಿಂತ ಅಮೆರಿಕ, ಟೊಮಹಾಕ್ಸ್‌ ಗುರಿ ನಿರ್ದೇಶಿತ ಕ್ಷಿಪಣಿ ಮತ್ತು ಪೆರ್ಶಿಂಗ್‌-2 ಮಧ್ಯಮ ಶ್ರೇಣಿ ಕ್ಷಿಪಣಿಗಳನ್ನು ನಿಯೋಜಿಸಿತು. ಇದೇ ವೇಳೆ, ಕ್ಷಿಪಣಿಗಳಿಗೆ ಮಿತಿ ಹೇರುವ ಉದ್ದೇಶದಿಂದ ಸೋವಿಯತ್‌ ಒಕ್ಕೂಟದೊಂದಿಗೆ ಮಾತುಕತೆ ನಡೆಸಲು ಮುಂದಾಯಿತು. 1981ರಲ್ಲಿ ರೊನಾಲ್ಡ್‌ ರೇಗನ್‌ ಅವರು ಅಧ್ಯಕ್ಷರಾಗುವುದರೊಂದಿಗೆ ಈ ಯತ್ನಕ್ಕೆ ವೇಗ ಸಿಕ್ಕಿತು.

'ಸೋವಿಯತ್‌ ಒಕ್ಕೂಟವು ಎಸ್‌ಎಸ್‌-20 ಕ್ಷಿಪಣಿಗಳನ್ನು ವಾಪಸ್‌ ಪಡೆದರೆ, ಅಮೆರಿಕ ಟೊಮೊಹಾಕ್ಸ್‌ ಮತ್ತು ಪೆರ್ಶಿಂಗ್‌-2 ಕ್ಷಿಪಣಿಗಳನ್ನು ಯುರೋಪ್‌ ರಾಷ್ಟ್ರಗಳಿಂದ ತೆರೆವುಗೊಳಿಸಲಿದೆ' ಎಂದು ರೇಗನ್‌ ಘೋಷಿಸಿದರು. ಈ ಪ್ರಸ್ತಾವದ ಬಗ್ಗೆ ಸೋವಿಯತ್‌ ಒಕ್ಕೂಟ ಸ್ಪಷ್ಟ ನಿರ್ಧಾರ ಕೈಗೊಳ್ಳಲಿಲ್ಲ. 1983ರಲ್ಲಿ ಅಮೆರಿಕವು ಈ ಹಿಂದೆ ಯೋಜಿಸಿದ್ದಂತೆ, ಕ್ಷಿಪಣಿಗಳನ್ನು ನಿಯೋಜಿಸಿತು. ಇದರಿಂದ ಅಸಮಾಧಾನಗೊಂಡ ಸೋವಿಯತ್‌ ಒಕ್ಕೂಟ ಎರಡೂ ರಾಷ್ಟ್ರಗಳ ನಡುವೆ ಪ್ರಗತಿಯಲ್ಲಿದ್ದ ಶಸ್ತ್ರಾಸ್ತ್ರ ನಿಯಂತ್ರಣ ಮಾತುಕತೆಯಿಂದ ಹೊರನಡೆಯಿತು. 1985ರ ಆರಂಭದಲ್ಲಿ ಈ ಮಾತುಕತೆಗೆ ಮತ್ತೆ ಚಾಲನೆ ಸಿಕ್ಕಿತು. ಅಮೆರಿಕ, ಸೋವಿಯತ್‌ ಒಕ್ಕೂಟ ಹಾಗೂ ನ್ಯಾಟೊದ ಪ್ರತಿ ದೇಶವೂ ಮಧ್ಯಮ ಶ್ರೇಣಿಯ ಕ್ಷಿಪಣಿಗಳ ಬಳಕೆಗೆ ಮಿತಿ ಹೇರುವ ವಿಚಾರ ಚರ್ಚೆಗೆ ಬಂತು. ಸೋವಿಯತ್‌ ಒಕ್ಕೂಟ ಏಷ್ಯಾದಲ್ಲಿ ನಿಯೋಜಿಸಿದ್ದ ಎಸ್‌ಎಸ್‌-20 ಕ್ಷಿಪಣಿಗಳನ್ನು ತೆರವುಗೊಳಿಸುವ ಉಲ್ಲೇಖ ಇಲ್ಲದಿದ್ದರೆ, ಒಪ್ಪಂದಕ್ಕೆ ಸಹಿ ಹಾಕುವುದಿಲ್ಲ ಎಂದು ಅಮೆರಿಕ ಹೇಳಿತು.

ಮುಂದಿನ 2 ವರ್ಷ ಇದೇ ವಿಚಾರವಾಗಿ ಎರಡೂ ರಾಷ್ಟ್ರಗಳ ನಡುವೆ ಚರ್ಚೆ ನಡೆಯಿತು. ಅಂತಿಮವಾಗಿ ಮಧ್ಯಮ ಶ್ರೇಣಿಯ ಕ್ಷಿಪಣಿಗಳ ಜೊತೆಗೆ ಕಡಿಮೆ ಶ್ರೇಣಿಯ ಕ್ಷಿಪಣಿಗಳನ್ನೂ ಯುರೋಪ್‌ ರಾಷ್ಟ್ರಗಳಿಂದ ತೆರವುಗೊಳಿಸುವ ಒಪ್ಪಂದಕ್ಕೆ ಸಮ್ಮತಿಸಿದವು.

1987ರ ಡಿ.8ರಂದು ರೇಗನ್‌ ಮತ್ತು ಗೊರ್ಬಚೆವ್‌ ಅವರು ವಾಷಿಂಗ್ಟನ್‌ನಲ್ಲಿ ಐಎನ್‌ಎಫ್‌ ಒಪ್ಪಂದಕ್ಕೆ ಸಹಿ ಹಾಕಿದರು. ಯುರೋಪ್‌ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಅಲ್ಪ ಮತ್ತು ಮಧ್ಯಮ ಶ್ರೇಣಿಯ ಪರಮಾಣು ಸಾಮರ್ಥ್ಯದ ಕ್ಷಿಪಣಿಗಳನ್ನು ನಿಯೋಜಿಸುವುದಕ್ಕೆ ನಿರ್ಬಂಧ ವಿಧಿಸುವುದರ ಜೊತೆಗೆ ಆ ವೇಳೆಗಾಗಲೇ ನಿಯೋಜಿಸಿದ್ದ ಕ್ಷಿಪಣಿಗಳನ್ನು ತೆರವುಗಳಿಸಲು ಈ ಒಪ್ಪಂದ ಅವಕಾಶ ಕಲ್ಪಿಸಿತು. ಅಲ್ಲದೇ, ಕ್ಷಿಪಣಿಗಳ ಬಳಕೆ ಮತ್ತು ನಿಯೋಜನೆಗೆ ಸಂಬಂಧಿಸಿದಂತೆ, ಬೇರೆ ದೇಶಗಳಿಗೂ ಭೇಟಿ ಕೊಟ್ಟು ಆಂತರಿಕ ಪರಿಶೀಲನೆ ಮಾಡುವುದು ಸೇರಿದಂತೆ ವಿಸ್ತೃತವಾಗಿ ದೃಢೀಕರಣ ಮಾಡಲು ಈ ಒಪ್ಪಂದ ಅನುವು ಮಾಡಿತು.

ಚೀನಾದಿಂದಲೂ ಸ್ಪರ್ಧೆ

ಶಸ್ತ್ರಾಸ್ತ್ರಕ್ಕೆ ಸಂಬಂಧಿಸಿದ ಪೈಪೋಟಿ ಅಮೆರಿಕ ಮತ್ತು ರಷ್ಯಾದ ನಡುವೆ ಮಾತ್ರ ನಡೆಯುತ್ತಿಲ್ಲ. ಜಾಗತಿಕವಾಗಿ ದೊಡ್ಡ ಆರ್ಥಿಕ ಶಕ್ತಿಯಾಗುತ್ತಿರುವ ಚೀನಾ ಕೂಡ ಸ್ಪರ್ಧೆಯಲ್ಲಿದೆ ಎಂಬ ಅಭಿಪ್ರಾಯವನ್ನೂ ರಕ್ಷಣಾ ತಜ್ಞರು ವ್ಯಕ್ತಪಡಿಸುತ್ತಾರೆ.

ಅಮೆರಿಕದ ರಕ್ಷಣಾ ಇಲಾಖೆ ಪ್ರಕಾರ, 300 ಕಿ.ಮೀ ನಿಂದ 3,000 ಕಿ.ಮೀ ದೂರದವರೆಗೆ ಸಾಗುವ ಸಾಮರ್ಥ್ಯ ಹೊಂದಿರುವ 2,300 ಕ್ಷಿಪಣಿಗಳು ಮತ್ತು 3,000 ಕಿ.ಮೀನಿಂದ 5,000 ಕಿ.ಮೀ ವ್ಯಾಪ್ತಿಯ 500 ಕ್ಷಿಪಣಿಗಳು ಚೀನಾದ ಬಳಿ ಇವೆ.

2019ರಲ್ಲಿ ಡೊನಾಲ್ಡ್‌ ಟ್ರಂಪ್‌ ರಷ್ಯಾದೊಂದಿಗಿನ ಒಪ್ಪಂದದಿಂದ ಹಿಂದೆ ಸರಿಯಲು ಚೀನಾದ ಕ್ಷಿಪಣಿಗಳ ಸಾಮರ್ಥ್ಯದ ಬಗೆಗಿನ ಕಳವಳವೂ ಒಂದು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಏಷ್ಯಾದಲ್ಲಿರುವ ತನ್ನ ಮಿತ್ರ ರಾಷ್ಟ್ರಗಳಲ್ಲಿ ಮಧ್ಯಮ ಶ್ರೇಣಿಯ ಕ್ಷಿಪಣಿಗಳನ್ನು ನಿಯೋಜಿಸಲು ಅಮೆರಿಕ ಸಿದ್ದತೆ ನಡೆಸಿದೆ. ಏಪ್ರಿಲ್‌ನಲ್ಲಿ ಫಿಲಿಪ್ಪೀನ್ಸ್‌ನಲ್ಲಿ ನಡೆದಿದ್ದ ಸೇನಾ ಸಮರಾಭ್ಯಾಸದಲ್ಲಿ ಈ ಹಿಂದೆ ನಿರ್ಬಂಧಿಸಲಾಗಿದ್ದ, ಮಧ್ಯಮ ಶ್ರೇಣಿಯ ಕ್ಷಿಪಣಿಗಳನ್ನು ಅದು ನಿಯೋಜಿಸಿತ್ತು.

ಇದೀಗ ನಡೆಯುತ್ತಿರುವ ಶಸ್ತ್ರಾಸ್ತ್ರ ಪೈಪೋಟಿ ರಷ್ಯಾ ಹಾಗೂ ಅಮೆರಿಕ ನಡುವಣ ಸ್ಪರ್ಧೆಯಾಗಿ ಉಳಿದಿಲ್ಲ. ಚೀನಾ ಮಾತ್ರವಲ್ಲದೆ, ದಕ್ಷಿಣ ಕೊರಿಯಾ, ಜಪಾನ್‌ನಂತಹ ಏಷ್ಯಾದಲ್ಲಿರುವ ಅಮೆರಿಕದ ಮಿತ್ರ ರಾಷ್ಟ್ರಗಳು ಕೂಡ ಇದರಲ್ಲಿ ಭಾಗಿಯಾಗುವ ಸಾಮರ್ಥ್ಯ ಹೊಂದಿವೆ' ಎಂಬುದು ಉಲ್ರಿಚ್ ಕ್ಯೂನ್ ಪ್ರತಿಪಾದನೆ.

'ಈಗ ಅಮೆರಿಕ ಮತ್ತು ರಷ್ಯಾಗಳು 1987ರ ಮಾದರಿಯ ಒಪ್ಪಂದಕ್ಕೆ ಬರುವ ಸಾಧ್ಯತೆ ಕ್ಷೀಣ. ಚೀನಾದ ಕಾರಣಕ್ಕೆ ಅಮೆರಿಕವಂತೂ ಇದಕ್ಕೆ ಒಪ್ಪಲಾರದು' ಎಂದು ಬಕ್ಲಿತ್‌ಸ್ಕಿ ವಿಶ್ಲೇಷಿಸುತ್ತಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries