ನವದೆಹಲಿ: ಇಂದಿನ ಕಾಂಪಿಟೇಟಿವ್ ಯುಗದಲ್ಲಿ ಒಂದು ಹುದ್ದೆಗೆ ಹಲವು ಅರ್ಜಿಗಳು ಬರುತ್ತವೆ. ಆದರೆ ಇಲ್ಲಿ ನಾವು ನಿಮಗೆ ಅರ್ಜಿದಾರರೊಬ್ಬರು ಸಲ್ಲಿಸಿರುವ ವಿಚಿತ್ರ ಅರ್ಜಿ ಬಗ್ಗೆ ತಿಳಿಸಲಿದ್ದೇವೆ. ಹಲವು ಬಾರಿ ಅರ್ಜಿ ಸಲ್ಲಿಸಿ ಬೇಸತ್ತು ಕೊನೆಗೆ ತಮ್ಮ ಅರ್ಜಿಯಲ್ಲೇ ಹತಾಶೆಯನ್ನು ತೋರಿಸಿ ಕಂಪನಿಯನ್ನೇ ಬೆಚ್ಚಿ ಬೀಳಿಸಿದ್ದಾರೆ.
ಸದ್ಯ ಅವರು ಸಲ್ಲಿಸಿರುವ ಈ ಅರ್ಜಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಕಂಪನಿಯೊಂದಕ್ಕೆ ಅಕೌಂಟೆಂಟ್ ಹುದ್ದೆಗೆ ಹಲವು ಬಾರಿ ಅರ್ಜಿ ಸಲ್ಲಿಸಿ ವ್ಯಕ್ತಿಯೊಬ್ಬರು ಪ್ರತಿ ಬಾರಿಯೂ ರಿಜೆಕ್ಟ್ ಆಗಿದ್ದಾರೆ. ಆದರೆ ತಮ್ಮ ಪ್ರಯತ್ನವನ್ನು ಬಿಡದೆ ಅದೇ ಕಂಪನಿಗೆ ಪುನಃ ಅರ್ಜಿ ಸಲ್ಲಿಸುವ ವೇಳೆಗೆ ಅವರ ಹತಾಶೆ ಎಷ್ಟಿತ್ತು ಎಂಬುದು ಅವರು ಸಲ್ಲಿಸಿದ್ದ ಅರ್ಜಿಯಿಂದಲೇ ತಿಳಿಯುತ್ತಿದೆ. ಅಕೌಟೆಂಟ್ ಹುದ್ದೆಯಲ್ಲಿದ್ದ ಕಂಪನಿ ಸಿಬ್ಬಂದಿ ನಿಧನರಾದ ಬಳಿಕೆ ಆ ವ್ಯಕ್ತಿ ಮತ್ತೊಮ್ಮೆ ಅಕೌಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ, ಅರ್ಜಿ ಜತೆಗೆ ಹುದ್ದೆಯು ಖಾಲಿ ಇದೆ ಎಂಬುದಕ್ಕೆ ಪುರಾವೆಯನ್ನು ಸಹ ಲಗತ್ತಿಸಿದ್ದಾರೆ.
ಅವರು ಸಲ್ಲಿಸಿರುವ ಅರ್ಜಿಯಲ್ಲಿ, ನಿಮ್ಮ ಕಚೇರಿಯ ಅಕೌಂಟೆಂಟ್ ಅವರ ಸಾವಿನ ಬಗ್ಗೆ ನನಗೆ ತಿಳಿದಿದೆ. ಮರಣ ಹೊಂದಿದ ಅವರ ಹುದ್ದೆಗೆ ನಾನು ಅರ್ಜಿ ಸಲ್ಲಿಸುತ್ತಿದ್ದೇನೆ. ಈ ಹಿಂದೆ ಹಲವು ಬಾರಿ ಅರ್ಜಿ ಸಲ್ಲಿಸಿದ್ದಾಗಿ ಆ ವ್ಯಕ್ತಿ ತನ್ನ ಅರ್ಜಿಯಲ್ಲಿ ತಿಳಿಸಿರುವುದಲ್ಲದೆ, ಪ್ರತಿ ಬಾರಿಯೂ ಕಂಪನಿಯು ಖಾಲಿ ಹುದ್ದೆ ಇಲ್ಲ ಎಂಬ ನೆಪ ಹೇಳಿ ತಿರಸ್ಕರಿಸಿದೆ ಎಂದು ಉಲ್ಲೇಖಿಸಿದ್ದಾರೆ.
ನಾನು ಪ್ರತಿ ಬಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಿದಾಗ ಯಾವುದೇ ಖಾಲಿ ಹುದ್ದೆ ಇಲ್ಲ ಎಂದು ನನಗೆ ಉತ್ತರ ಬರುತಿತ್ತು. ಆದರೆ ಈ ಸಂದರ್ಭದಲ್ಲಿ ನಾನು ನಿಮ್ಮನ್ನು ರೆಡ್ಹ್ಯಾಂಡ್ ಆಗಿ ಹಿಡಿದಿದ್ದೇನೆ. ಸಾವಿನ ಬಗ್ಗೆ ಸುದ್ದಿ ತಿಳಿದ ಬಳಿಕ ಅವರು ನಿಜವಾಗಿಯೂ ನಿಧನರಾಗಿದ್ದಾರೆಯೇ ಎಂದು ಖಚಿತ ಪಡಿಸಿಕೊಳ್ಳಲು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದೆ. ಈ ಬಾರಿ ನೀವು ನನ್ನನ್ನು ಹುದ್ದೆ ಖಾಲಿ ಇಲ್ಲ ಎಂದು ಹೇಳಿ ತಪ್ಪಿಸಲು ಸಾಧ್ಯವಿಲ್ಲ. ನನಗೊಂದು ಕೆಲಸ ಕೊಡಿ ಎಂದು ಬರೆದಿದ್ದಾರೆ.
ಅರ್ಜಿದಾರರ ಉದ್ಯೋಗ ಅರ್ಜಿ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅದನ್ನು ನೊಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಅನೇಕರ ಆತನಿಗೆ ಕೆಲಸ ಸಿಕ್ಕಿತೇ ಎಂದು ಕಾಮೆಂಟ್ ಕೂಡ ಮಾಡಿದ್ದಾರೆ. ಅಪ್ಲಿಕೇಶನ್‌ನಲ್ಲಿರುವ ಸಂತಾಪ ಸಂದೇಶವನ್ನು ನೋಡಿದ ಜನರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.