ಬದಿಯಡ್ಕ: ದೇವಾಲಯಗಳು ಸಮಾಜದ ಸಕಾರಾತ್ಮಕ ಶಕ್ತಿಯ ಕೇಂದ್ರಗಳಾಗಿವೆ. ನಾವು ಸಂಘಟಿತರಾಗಿ ಇಂತಹ ಕೇಂದ್ರಗಳನ್ನು ಬಲಪಡಿಸಬೇಕು. ಸಕಾರಾತ್ಮಕ ಪ್ರಾರ್ಥನೆಗೆ ಅಪರಿಮಿತ ಶಕ್ತಿ ಇದೆ ಎಂದು ವಿಶ್ವಹಿಂದೂ ಪರಿಷತ್ತು ಮುಖಂಡ ಹಾಗೂ ಬಂಟರ ಸಂಘದ ಅಧ್ಯಕ್ಷ ಸಂತೋಷ್ ರೈ ಗಾಡಿಗುಡ್ಡೆ ಹೇಳಿದರು.
ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಭಾನುವಾರ ನಡೆದ ಸಿದ್ಧತಾ ಸಭೆಯಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ದೇವಸ್ಥಾನದ ಆಡಳಿತ ಮೊಕ್ತೇಸರರು ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರೂ ಆದ ವೈ.ಶಾಮ ಭಟ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕೃಪಾನಿಧಿ ಶಾಸ್ತ್ರಿ ಕೊಲ್ಲಂಗಾನ, ಕೋಶಾಧಿಕಾರಿ ಸುಬ್ರಹ್ಮಣ್ಯ ವೈ .ವಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ.ಅನ್ನಪೂರ್ಣೇಶ್ವರಿ ಏತಡ್ಕ ಪ್ರಾರ್ಥನೆಗೈದರು.
ಕ್ಷೇತ್ರ ತಂತ್ರಿಗಳಾದ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಅವರ ಮಾರ್ಗದರ್ಶನದಲ್ಲಿ ಜುಲೈ 6 ಮತ್ತು 7ರಂದು ಶ್ರೀ ಕ್ಷೇತ್ರದಲ್ಲಿ ನಡೆಯುವ ವಿವಿಧ ಹವನಗಳು ಹಾಗೂ ಅಪ್ಪ ಸೇವೆಯ ಯಶಸ್ವೀ ನಿರ್ವಹಣೆ ಕುರಿತು ವಿಚಾರ ವಿನಿಮಯ ನಡೆಯಿತು. ಬ್ರಹ್ಮಕಲಶೋತ್ಸವ ಸಮಿತಿಯ ವಿವಿಧ ಪದಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಅಭೂತಪೂರ್ವವಾಗಿ ನಡೆಸುವುದು ಎಂದು ನಿರ್ಣಯಿಸಲಾಯಿತು. ಚಂದ್ರಶೇಖರ ಏತಡ್ಕ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.