ಲಂಡನ್: ಕೆಂಪು ಸಮುದ್ರದ ಮಾರ್ಗದಲ್ಲಿ ಸಂಚರಿಸುವ ವೇಳೆ ಕ್ಷಿಪಣಿ ದಾಳಿಯಿಂದ ತೈಲ ತುಂಬಿದ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿ ಅಸಾಧಾರಣ ಸಾಹಸ ಪ್ರದರ್ಶಿಸಿದ ಕ್ಯಾಪ್ಟನ್ ಅವ್‌ಹಿಲಾಸ್ ರಾವತ್ ಹಾಗೂ ತಂಡವು ಅಂತರರಾಷ್ಟ್ರೀಯ ಸಾಗರ ಒಕ್ಕೂಟ ಸಂಸ್ಥೆ (ಐಎಂಒ)ಯು ನೀಡುವ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದೆ.
ಸಂಕಷ್ಟದ ಸಂದರ್ಭದಲ್ಲಿ ಅಗತ್ಯ ನೆರವು ನೀಡಿದ ಐಎನ್‌ಎಸ್ ವಿಶಾಖಪಟ್ಟಣಂ ಕ್ಯಾಪ್ಟನ್ ಬೃಜೇಶ್ ನಂಬಿಯಾರ್ ಹಾಗೂ ತಂಡಕ್ಕೂ ಪ್ರಶಂಸಾ ಪತ್ರ ನೀಡಲಾಗಿದೆ.
ಅಂದು ಏನಾಗಿತ್ತು..?
ಈ ವರ್ಷ ಜನವರಿ 26ರ ರಾತ್ರಿ ಸೂಯೆಜ್‌ನಿಂದ ಇಂಚಿಯಾನ್‌ಗೆ ಹೋಗುವ ಮಾರ್ಗದಲ್ಲಿ 84,147 ಟನ್ ತೈಲ ಹೊತ್ತು ಸಾಗುತ್ತಿದ್ದ 'ಮಾರ್ಲಿನ್ ಲೌಂಡಾ' ಹಡಗಿನ ಮೇಲೆ ಹೂಥಿ ಬಂಡುಕೋರರು ಕ್ಷಿಪಣಿ ದಾಳಿ ನಡೆಸಿದ್ದರು. ಇದರಿಂದ ಹಡಗಿನಲ್ಲಿದ್ದ ಒಂದು ಕಾರ್ಗೋ ಟ್ಯಾಂಕ್‌ನಲ್ಲಿ ಸ್ಫೋಟ ಸಂಭವಿಸಿ, 5 ಮೀಟರ್ ತನಕ ಬೆಂಕಿ ಆವರಿಸಿಕೊಂಡಿತ್ತು. ಹಾನಿಯ ಹೊರತಾಗಿಯೂ, ಕ್ಯಾಪ್ಟನ್ ಅವ್‌ಹಿಲಾಸ್ ರಾವತ್ ಹಾಗೂ ತಂಡವು ಅಗ್ನಿಶಾಮಕ ತಂಡದೊಂದಿಗೆ ಕ್ಷಿಪ್ರಗತಿಯಲ್ಲಿ ಬೆಂಕಿ ನಿಯಂತ್ರಿಸಿತ್ತು. ಸಿಬ್ಬಂದಿಯನ್ನು ರಕ್ಷಿಸಿ, ಹಡಗಿನ ಸಂಚಾರವನ್ನೂ ನಿಯಂತ್ರಣಕ್ಕೆ ತೆಗೆದುಕೊಂಡಿತ್ತು. ರಕ್ಷಣಾ ದೋಣಿಗಳು ನಾಶಗೊಂಡಿದ್ದರೂ, ಎಲ್ಲ ಸಿಬ್ಬಂದಿ ತೆರವುಗೊಳಿಸಲು ಕ್ರಮ ಕೈಗೊಂಡಿದ್ದರು' ಎಂದು ಸಂಸ್ಥೆಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
'ಈ ವೇಳೆ ಅಲ್ಲಿಯೇ ಗಸ್ತು ತಿರುಗುತ್ತಿದ್ದ ಐಎನ್‌ಎಸ್ ವಿಶಾಖಪಟ್ಟಣಂ ಯುದ್ಧನೌಕೆಯು ಈ ಮಾಹಿತಿ ಪಡೆದು, ರಕ್ಷಣಾ ಕಾರ್ಯಾಚರಣೆಗೆ ಕೈ ಜೋಡಿಸಿತ್ತು. ಅತ್ಯಂತ ತೀವ್ರ ಜೀವಭಯದ ಹೊರತಾಗಿಯೂ, ಕ್ಷಿಪಣಿ ದಾಳಿ ನಡೆದ 24 ತಾಸುಗಳ ಕಾರ್ಯಾಚರಣೆ ಬಳಿಕ ಭಾರತೀಯ ನೌಕಾದಳದ ಬೆಂಗಾವಲಿನಲ್ಲಿ ಸುರಕ್ಷಿತವಾಗಿ ತೆರಳಿತ್ತು' ಎಂದು ಐಎಂಒ ಮೆಚ್ಚುಗೆ ವ್ಯಕ್ತಪಡಿಸಿದೆ.
ಈ ವರ್ಷದ ಡಿಸೆಂಬರ್ 2ರಂದು ಲಂಡನ್‌ನಲ್ಲಿರುವ ಐಎಂಒ ಕೇಂದ್ರ ಕಚೇರಿಯಲ್ಲಿ ನಡೆಯಲಿರುವ ಸಾಗರ ಭದ್ರತಾ ಸಮಿತಿಯ 109ನೇ ವರ್ಷದ ಸಮಾವೇಶದಲ್ಲಿ ಅವ್‌ಹಿಲಾಸ್ ರಾವತ್ ತಂಡವು ಈ ಪ್ರಶಸ್ತಿ ಸ್ವೀಕರಿಸಲಿದೆ.