ಮೆಲ್ಬೋರ್ನ್: ಆಸ್ಟ್ರೇಲಿಯಾ ಅಂತರಾಷ್ಟ್ರೀಯ ವಿದ್ಯಾರ್ಥಿ ವೀಸಾ ಶುಲ್ಕವನ್ನು 710 ಡಾಲರ್ ಗಳಿಂದ 1600 ಡಾಲರ್ ಗೆ ಹೆಚ್ಚಿಸಿದ್ದು, ಇದು ದೇಶದಲ್ಲಿ ವಿದ್ಯಾಭ್ಯಾಸ ಮಾಡಲು ಉದ್ದೇಶಿಸಿರುವ ಲಕ್ಷಾಂತರ ಭಾರತೀಯ ವಿದ್ಯಾರ್ಥಿಗಳ ಮೇಲೆ ದೊಡ್ಡ ಪರಿಣಾಮ ಬೀರಲಿದೆ.
ವಿದ್ಯಾರ್ಥಿ ಪ್ರತಿನಿಧಿಗಳು ಈ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಈ ನಡೆಯಿಂದ ಸಂಭಾವ್ಯ ವಿದ್ಯಾರ್ಥಿಗಳ ನಡುವೆಯೇ ಪೈಪೋಟಿ ಏರ್ಪಡಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಎಬಿಸಿ ನ್ಯೂಸ್ ವರದಿ ಮಾಡಿದೆ.
ಈ ಶುಲ್ಕ ಹೆಚ್ಚಳದಿಂದ ಪದವೀಧರ ಸಾಲ ಕಡಿತ, ಅಪ್ರೆಂಟಿಸ್ ವಿದ್ಯಾರ್ಥಿಗಳಿಗೆ ಹಣಕಾಸು ನೆರವು ನೀಡಲು ಮತ್ತು ವಲಸೆ ಕಾರ್ಯತಂತ್ರದ ಅನುಷ್ಠಾನ ಸೇರಿದಂತೆ ಹಲವು ಶಿಕ್ಷಣ ಉಪಕ್ರಮಗಳಿಗೆ ನೆರವಾಗಲಿದೆ ಎಂದು ಆಸ್ಟ್ರೇಲಿಯಾ ಸಮರ್ಥಿಸಿಕೊಂಡಿದೆ.
ಕ್ಯಾನ್ಬೆರ್ರಾದಲ್ಲಿರುವ ಭಾರತೀಯ ಮಿಷನ್ ಪ್ರಕಾರ, 2023ರ ಆಗಸ್ಟ್ ನಲ್ಲಿ ಆಸ್ಟ್ರೇಲಿಯಾದಲ್ಲಿ ಭಾರತದ 1.2 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಹಾಗೂ ವಿದೇಶಿ ವಿದ್ಯಾರ್ಥಿಗಳ ಪೈಕಿ ಭಾರತ ಎರಡನೇ ಸ್ಥಾನದಲ್ಲಿದೆ.