ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಒಂದು ದಿನ ಚರ್ಚೆಗೆ ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಒತ್ತಾಯಿಸಿದ್ದು, ಇದಕ್ಕೆ ಸ್ಪೀಕರ್ ಅನುಮತಿ ನೀಡದ ಕಾರಣ ಪ್ರತಿಭಟನೆ ನಡೆಸಿ ಸಭಾತ್ಯಾಗ ಮಾಡಿವೆ.
ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆ ನೀಟ್ ಅಕ್ರಮ ಕುರಿತ ಚರ್ಚೆಗೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದರು.
'ನೀಟ್ ಅಕ್ರಮದ ಬಗ್ಗೆ ಒಂದು ದಿನ ಪ್ರತ್ಯೇಕ ಚರ್ಚೆಯನ್ನು ನಾವು ಬಯಸುತ್ತಿದ್ದೇವೆ. ಇದು ಅತ್ಯಂತ ಪ್ರಮುಖ ವಿಷಯ. 2 ಕೋಟಿಗೂ ಅಧಿಕ ವಿದ್ಯಾರ್ಥಿಗಳಿಗೆ ಅನಾನುಕೂಲವಾಗಿದೆ. 70 ಕಡೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಆಗಿದೆ. ಈ ಬಗ್ಗೆ ಪ್ರತ್ಯೇಕ ಚರ್ಚೆಗೆ ಅವಕಾಶ ನೀಡಿದರೆ ನಮಗೆ ಅತ್ಯಂತ ಸಂತಸವಾಗುತ್ತದೆ' ಎಂದು ರಾಹುಲ್ ಮನವಿ ಮಾಡಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಲೋಕಸಭೆ ಉಪನಾಯಕ ಸಿಂಗ್, ಸದನದಲ್ಲಿ ಚರ್ಚೆಗೆ ಕೆಲವು ನೀತಿ ನಿಯಮಗಳಿವೆ. ಅವುಗಳೇ ಸದನವನ್ನು ಗಟ್ಟಿಗೊಳಿಸಿವೆ ಎಂದು ಹೇಳಿದರು.
'ನನ್ನ ದಶಕಗಳ ಅನುಭವದಲ್ಲಿ ವಂದನಾ ನಿರ್ಣಯದ ಚರ್ಚೆ ವೇಳೆ ಬೇರೆ ಯಾವುದೇ ವಿಷಯವನ್ನು ಚರ್ಚೆಗೆ ತೆಗೆದುಕೊಂಡಿಲ್ಲ. ಈ ಚರ್ಚೆ ಮುಗಿದ ಬಳಿಕವೇ ಉಳಿದ ವಿಷಯಗಳ ಚರ್ಚೆ ನಡೆಯುತ್ತದೆ' ಎಂದು ಹೇಳಿದರು.
ವಂದನಾ ನಿರ್ಣಯದ ಮೇಲಿನ ಚರ್ಚೆ ಬಳಿಕ ನೀಟ್ ಕುರಿತ ಚರ್ಚೆಗೆ ಅವಕಾಶ ನೀಡುವ ಬಗ್ಗೆ ಸ್ಪಷ್ಟ ಭರವಸೆ ನೀಡುವಂತೆ ರಾಹುಲ್ ಮತ್ತು ವಿಪಕ್ಷಗಳ ಸದಸ್ಯರು ಒತ್ತಾಯಿಸಿದರು.
ವಂದನಾ ನಿರ್ಣಯದ ಮೇಲಿನ ಚರ್ಚೆಯ ಸಮಯದಲ್ಲಿ ಬೇರೆ ಯಾವುದೇ ಚರ್ಚೆಯನ್ನು ತೆಗೆದುಕೊಳ್ಳುವ ಸಂಪ್ರದಾಯವಿಲ್ಲ ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿದರು. ವಿಪಕ್ಷಗಳ ಸದಸ್ಯರು ನೀಟ್ ಮೇಲಿನ ಚರ್ಚೆಗೆ ಪ್ರತ್ಯೇಕ ನೋಟಿಸ್ ನೀಡಬಹುದು ಎಂದರು.
ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯನ್ನು ಆರಂಭಿಸಲು ಸ್ಪೀಕರ್ ಬಿಜೆಪಿ ಸದಸ್ಯ ಅನುರಾಗ್ ಠಾಕೂರ್ ಅವರನ್ನು ಕರೆಯುತ್ತಿದ್ದಂತೆ ಪ್ರತಿಪಕ್ಷದ ಸದಸ್ಯರು ಸಿಟ್ಟಿಗೆದ್ದರು.
ನೀಟ್ ಕುರಿತು ಪ್ರತ್ಯೇಕ ಚರ್ಚೆ ನಡೆಸುವ ಕುರಿತು ಸರ್ಕಾರದಿಂದ ಸ್ಪಷ್ಟ ಭರವಸೆ ನೀಡುವಂತೆ ಪ್ರತಿಪಕ್ಷದ ಸದಸ್ಯರು ಪಟ್ಟು ಹಿಡಿದು, ಸಭಾತ್ಯಾಗ ನಡೆಸಿದರು.