ನವದೆಹಲಿ: ಕಾನೂನು ಪದವೀಧರರನ್ನು ವಕೀಲರನ್ನಾಗಿ ನೋಂದಾಯಿಸಿಕೊಳ್ಳಲು ರಾಜ್ಯ ವಕೀಲರ ಪರಿಷತ್ತುಗಳು ದುಬಾರಿ ಶುಲ್ಕ ವಿಧಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ದುಬಾರಿ ಶುಲ್ಕ ವಿಧಿಸುವುದರಿಂದ, ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸೇರಿದವರನ್ನು ಹಾಗೂ ತುಳಿತಕ್ಕೆ ಒಳಗಾದ ಸಮುದಾಯದವರನ್ನು ವ್ಯವಸ್ಥಿತ ತಾರತಮ್ಯಕ್ಕೆ ಗುರಿಪಡಿಸಿದಂತೆ ಆಗುತ್ತದೆ ಎಂದು ಕೋರ್ಟ್ ಹೇಳಿದೆ.
ಸಂಸತ್ತು ರೂಪಿಸಿರುವ ಹಣಕಾಸಿನ ನೀತಿಯಲ್ಲಿ ಬದಲಾವಣೆ ತರುವುದಕ್ಕೆ ಭಾರತೀಯ ವಕೀಲರ ಪರಿಷತ್ತಿಗಾಗಲಿ (ಬಿಸಿಐ) ರಾಜ್ಯ ವಕೀಲರ ಪರಿಷತ್ತುಗಳಿಗಾಗಲಿ (ಎಸ್‌ಬಿಸಿ) ಅವಕಾಶ ಇಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ವಕೀಲರ ಪರಿಷತ್ತುಗಳು ಸಾಮಾನ್ಯ ವರ್ಗದವರನ್ನು ವಕೀಲರನ್ನಾಗಿ ನೋಂದಾಯಿಸಿಕೊಳ್ಳಲು ₹650 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದವರನ್ನು ವಕೀಲರನ್ನಾಗಿ ನೋಂದಾಯಿಸಿಕೊಳ್ಳಲು ₹125ಕ್ಕಿಂತ ಹೆಚ್ಚು ಶುಲ್ಕ ಪಡೆಯುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠವು ಹೇಳಿದೆ.
ರಾಜ್ಯ ವಕೀಲರ ಪರಿಷತ್ತುಗಳು ನೋಂದಣಿ ಶುಲ್ಕದ ರೂಪದಲ್ಲಿ ಭಾರಿ ಮೊತ್ತವನ್ನು ಪಡೆದುಕೊಳ್ಳುತ್ತಿವೆ ಎಂದು ಕೆಲವು ವಕೀಲರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ಪೀಠವು ತೀರ್ಪನ್ನು ಕಾಯ್ದಿರಿಸಿತ್ತು. ತೀರ್ಪನ್ನು ಮಂಗಳವಾರ ಪ್ರಕಟಿಸಲಾಯಿತು.
ಒಡಿಶಾದಲ್ಲಿ ನೋಂದಣಿ ಶುಲ್ಕವು ₹42,100, ಗುಜರಾತ್‌ನಲ್ಲಿ ₹25 ಸಾವಿರ, ಉತ್ತರಾಖಂಡದಲ್ಲಿ ₹23,650, ಜಾರ್ಖಂಡ್‌ನಲ್ಲಿ ₹21,460 ಮತ್ತು ಕೇರಳದಲ್ಲಿ ₹20,050 ಇದೆ ಎಂದು ದೂರಲಾಗಿತ್ತು. ತೀರ್ಪು ನೀಡಿದ ಪೀಠದಲ್ಲಿ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರೂ ಇದ್ದರು.
ಈಗ ನೀಡಿರುವ ತೀರ್ಪು ಪೂರ್ವಾನ್ವಯ ಆಗುವುದಿಲ್ಲ ಎಂದು ಪೀಠವು ಸ್ಪಷ್ಟಪಡಿಸಿದೆ. ರಾಜ್ಯ ವಕೀಲರ ಪರಿಷತ್ತುಗಳು ಸಂಗ್ರಹಿಸಿರುವ ಹೆಚ್ಚುವರಿ ಶುಲ್ಕವನ್ನು ಮರಳಿಸಬೇಕಾದ ಅಗತ್ಯ ಇಲ್ಲ.
ಕಾನೂನು ಪದವೀಧರರನ್ನು ವಕೀಲರನ್ನಾಗಿ ನೋಂದಣಿ ಮಾಡಿಸಿಕೊಂಡ ನಂತರದಲ್ಲಿ ಪರಿಷತ್ತುಗಳು, ಇತರ ಸೇವೆಗಳಿಗೆ ಅವರಿಂದ ಶುಲ್ಕ ಪಡೆಯಬಹುದು ಎಂದು ಕೋರ್ಟ್ ಹೇಳಿದೆ.