ನವದೆಹಲಿ: ವಿಧಿಬದ್ಧವಾದ ಆಚರಣೆಗಳ ಅನುಸಾರ ಹಿಂದೂ ವಿವಾಹ ನಡೆಯದೇ ಇದ್ದಾಗ, ವಿವಾಹ ನೋಂದಣಿ ಪ್ರಮಾಣಪತ್ರಕ್ಕೆ ಯಾವುದೇ ಮಹತ್ವ ಇಲ್ಲ ಎಂದು ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠ ತೀರ್ಪು ನೀಡಿದೆ.
ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ, ನ್ಯಾಯಮೂರ್ತಿಗಳಾದ ರಾಜನ್ ರಾಯ್ ಮತ್ತು ಓಂಪ್ರಕಾಶ್ ಶುಕ್ಲಾ ಅವರಿದ್ದ ವಿಭಾಗೀಯ ಪೀಠವು, ವಿಧಿಬದ್ಧವಾಗಿ ನಡೆಯದ ಕಾರಣ ಮದುವೆ ಅನೂರ್ಜಿತ ಎಂದು ಘೋಷಿಸಿದೆ.
ವಿವಾಹ ನೋಂದಣಿ ಪ್ರಮಾಣಪತ್ರವನ್ನು ಪುರಾವೆಯಾಗಿ ಪರಿಗಣಿಸಿ ತನ್ನ ಮದುವೆಯನ್ನು ಮಾನ್ಯ ಮಾಡಿ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಮಹಿಳೆ ಅರ್ಜಿ ಸಲ್ಲಿಸಿದ್ದರು.
'ನಾನು ಮತ್ತು ನನ್ನ ತಾಯಿ 'ಧರ್ಮ ಗುರು' ಒಬ್ಬರ ಅನುಯಾಯಿಗಳಾಗಿದ್ದೆವು. ಅವರು ಕೆಲ ಖಾಲಿ ಕಾಗದಗಳ ಮೇಲೆ ನಮ್ಮ ಸಹಿ ಪಡೆದಿದ್ದರಲ್ಲದೇ, ನಮ್ಮಿಬ್ಬರನ್ನು ತಮ್ಮ ಧಾರ್ಮಿಕ ಸಂಸ್ಥೆಯ ಸದಸ್ಯರನ್ನಾಗಿ ಮಾಡಲು ಬಯಸಿದ್ದರು' ಎಂದು ಮಹಿಳೆ ಅರ್ಜಿಯಲ್ಲಿ ಹೇಳಿದ್ದಾರೆ.
'ಆರ್ಯ ಸಮಾಜ ದೇವಸ್ಥಾನವೊಂದರಲ್ಲಿ ನಿಮ್ಮ ಮಗಳನ್ನು ಮದುವೆಯಾಗಿದ್ದೇನೆ. ಮದುವೆಯ ನೋಂದಣಿಯೂ ಆಗಿದೆ ಎಂಬುದಾಗಿ ಧರ್ಮ ಗುರು ನನ್ನ ತಂದೆಗೆ ತಿಳಿಸಿದ್ದರು' ಎಂದು ಮಹಿಳೆ ಅರ್ಜಿಯಲ್ಲಿ ವಿವರಿಸಿದ್ದಾರೆ.
'ಕಾಗದಪತ್ರಗಳಿಗೆ ಮೋಸದಿಂದ ನನ್ನ ಸಹಿ ಪಡೆಯಲಾಗಿದೆ. ಹೀಗಾಗಿ ನನ್ನ ಮದುವೆ ಅನೂರ್ಜಿತ ಎಂಬುದಾಗಿ ಘೋಷಿಸಬೇಕು' ಎಂದು ಮಹಿಳೆ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು.
ಪ್ರತಿವಾದಿಯೂ ಕೂಡ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, 'ನನ್ನ ವೈವಾಹಿಕ ಹಕ್ಕುಗಳನ್ನು ರಕ್ಷಿಸಬೇಕು' ಎಂದು ಕೋರಿದ್ದರು.
ಕೌಟುಂಬಿಕ ನ್ಯಾಯಾಲಯವು ಮಹಿಳೆಯ ಅರ್ಜಿಯನ್ನು ತಿರಸ್ಕರಿಸಿತ್ತಲ್ಲದೇ, 'ಧರ್ಮ ಗುರು'ವಿನ ಅರ್ಜಿಯನ್ನು ಮಾನ್ಯ ಮಾಡಿ ಆದೇಶಿಸಿತ್ತು.
ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಹಿಳೆಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, 'ಹಿಂದೂ ಸಂಪ್ರದಾಯ-ಆಚರಣೆಗಳ ಪ್ರಕಾರ ಮದುವೆಯನ್ನು ನೆರವೇರಿಸಲಾಗಿದೆ ಎಂಬುದನ್ನು ಸಾಬೀತುಪಡಿಸುವ ಜವಾಬ್ದಾರಿ 'ಧರ್ಮ ಗುರು'ವಿನ ಮೇಲಿದೆ. ಆದರೆ, ಅದನ್ನು ಸಾಬೀತುಪಡಿಸುವಲ್ಲಿ ಅವರು ವಿಫಲರಾಗಿರುವ ಕಾರಣ ಈ ಮದುವೆ ಅನೂರ್ಜಿತ' ಎಂದು ತೀರ್ಪು ನೀಡಿದೆ.
ಮದುವೆಯು ವಿಧಿಬದ್ಧವಾಗಿ ನಡೆಯದೇ ಇರುವಾಗ ಆರ್ಯ ಸಮಾಜ ದೇವಸ್ಥಾನವು ನೀಡಿರುವ ವಿವಾಹ ನೋಂದಣಿ ಪ್ರಮಾಣಪತ್ರಕ್ಕೆ ಯಾವುದೇ ಮಹತ್ವ ಇಲ್ಲ ಎಂದೂ ಹೈಕೋರ್ಟ್ ಹೇಳಿದೆ.