ಕೊಲಂಬೊ: ಶ್ರೀಲಂಕಾದಲ್ಲಿ ಎಲ್‌ಟಿಟಿಇ ನಿರ್ನಾಮಗೊಳಿಸಿದ ಸೇನಾ ಕಾರ್ಯಾಚರಣೆಯ ರೂವಾರಿ ಮತ್ತು ಮಾಜಿ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಶರತ್ ಫೊನ್ಸೆಕಾ ಅವರು ಅಧ್ಯಕ್ಷೀಯ ಚುನಾವಣೆಗೆ ತಮ್ಮ ಉಮೇದುವಾರಿಕೆಯನ್ನು ಗುರುವಾರ ಔಪಚಾರಿಕವಾಗಿ ಘೋಷಿಸಿದರು.
ಕೊಲಂಬೊ: ಶ್ರೀಲಂಕಾದಲ್ಲಿ ಎಲ್‌ಟಿಟಿಇ ನಿರ್ನಾಮಗೊಳಿಸಿದ ಸೇನಾ ಕಾರ್ಯಾಚರಣೆಯ ರೂವಾರಿ ಮತ್ತು ಮಾಜಿ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಶರತ್ ಫೊನ್ಸೆಕಾ ಅವರು ಅಧ್ಯಕ್ಷೀಯ ಚುನಾವಣೆಗೆ ತಮ್ಮ ಉಮೇದುವಾರಿಕೆಯನ್ನು ಗುರುವಾರ ಔಪಚಾರಿಕವಾಗಿ ಘೋಷಿಸಿದರು.
ದ್ವೀಪ ರಾಷ್ಟ್ರದಲ್ಲಿ ಭ್ರಷ್ಟಾಚಾರ ಹತ್ತಿಕ್ಕುವ ಮತ್ತು ಆರ್ಥಿಕತೆಯನ್ನು ವೃದ್ಧಿಸುವ ಪ್ರತಿಜ್ಞೆಯೊಂದಿಗೆ ತಮ್ಮ ಉಮೇದುವಾರಿಕೆಯ ಮಾಹಿತಿಯನ್ನು 'ಎಕ್ಸ್' ಮೂಲಕ ಅವರು ಹಂಚಿಕೊಂಡಿದ್ದಾರೆ.
ಶ್ರೀಲಂಕಾದಲ್ಲಿ ಅಧ್ಯಕ್ಷೀಯ ಚುನಾವಣೆ ಬರುವ ಸೆಪ್ಟೆಂಬರ್ 17 ಮತ್ತು ಅಕ್ಟೋಬರ್ 16ರ ನಡುವೆ ನಡೆಯಲಿದೆ. ಚುನಾವಣೆಯ ದಿನಾಂಕವನ್ನು ಶುಕ್ರವಾರ ಪ್ರಕಟಿಸುವುದಾಗಿ ಚುನಾವಣಾ ಆಯೋಗ ಹೇಳಿದೆ.
'76 ವರ್ಷಗಳಿಂದ ಅಸಮರ್ಥ ರಾಜಕೀಯ ಗುಂಪು ನಮ್ಮನ್ನು ಮುನ್ನಡೆಸಿದ್ದು, ದೇಶವನ್ನು ದಿವಾಳಿತನಕ್ಕೆ ತಳ್ಳಿದೆ. ಶ್ರೀಲಂಕಾ ಬೆಳವಣಿಗೆ ಸಾಧಿಸಲು ಭ್ರಷ್ಟಾಚಾರವನ್ನು ಹತ್ತಿಕ್ಕಬೇಕಾಗಿದೆ. ಆದಾಯ, ಉತ್ಪಾದನೆ ಹೆಚ್ಚಿಸಲು ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಳ್ಳಬೇಕು. ಇದಕ್ಕಾಗಿ 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇನೆ' ಎಂದು ಫೊನ್ಸೆಕಾ ಹೇಳಿದ್ದಾರೆ.
ಪ್ರತ್ಯೇಕ ತಮಿಳು ದೇಶ ರಚಿಸಲು ಎಲ್‌ಟಿಟಿಇಯ ಪ್ರತ್ಯೇಕತಾವಾದಿಗಳು ನಡೆಸಿದ್ದ ಹೋರಾಟವನ್ನು ಹತ್ತಿಕ್ಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಫೊನ್ಸೆಕಾ, 2010ರ ಅಧ್ಯಕ್ಷೀಯ ಚುನಾವಣೆಯಲ್ಲಿ ಮಹಿಂದಾ ರಾಜಪಕ್ಸೆ ವಿರುದ್ಧ ಸ್ಪರ್ಧಿಸಿ, ಸೋತಿದ್ದರು.
ಹಾಲಿ ನ್ಯಾಯ ಸಚಿವ ವಿಜಯದಾಸ ರಾಜಪಕ್ಷೆ ಕೂಡ ಚುನಾವಣೆಗೆ ತಮ್ಮ ಉಮೇದುವಾರಿಕೆಯನ್ನು ಘೋಷಿಸಿ, 'ರಾಷ್ಟ್ರದ ಭವಿಷ್ಯಕ್ಕೆ ಈ ಚುನಾವಣೆ ನಿರ್ಣಾಯಕವಾಗಲಿದೆ' ಎಂದಿದ್ದಾರೆ.
ಪ್ರಮುಖ ವಿರೋಧ ಪಕ್ಷದ ನಾಯಕರಾದ ಸಜಿತ್ ಪ್ರೇಮದಾಸ ಮತ್ತು ಮಾರ್ಕ್ಸ್‌ವಾದಿ ಜೆವಿಪಿ ನಾಯಕ ಅನುರ ಕುಮಾರ ಡಿಸಾನಾಯಕೆ ಸಹ ತಮ್ಮ ಸ್ಪರ್ಧೆಯನ್ನು ಈಗಾಗಲೇ ಪ್ರಕಟಿಸಿದ್ದಾರೆ. ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಅವರೂ ಮರು ಆಯ್ಕೆ ಬಯಸಿದ್ದಾರೆ.