ಕಾಸರಗೋಡು : ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದ ವ್ಯಾಸ ಮಂಟಪದಲ್ಲಿ ಒಲಿಂಪಿಯಾಡ್ ಸ್ಪರ್ಧೆಯಲ್ಲಿ ರಜತ ಪದಕ ಗಳಿಸಿದ ಯೋಗ ಪಟು, ಶ್ರೀ ವೆಂಕಟ್ರಮಣ ಸ್ವಾಮಿ ಯಕ್ಷಗಾನ ಅಧ್ಯಯನ ಕೇಂದ್ರದ ವಿದ್ಯಾರ್ಥಿನಿ ಅಭಿಜ್ಞಾ ಅವರಿಗೆ ಅಧ್ಯಯನ ಕೇಂದ್ರದ ವತಿಯಿಂದ ಅಭಿನಂದನೆ ನಡೆಯಿತು.
ಯಕ್ಷರಂಗದ ಖ್ಯಾತ ಕಲಾವಿದ ರಾಧಾಕೃಷ್ಣ ನಾವಡ ಮಧೂರು ಇವರು ಶಾಲು ಹೊದಿಸಿ ಹಾರಾರ್ಪಣೆ ಮಾಡಿ ಶ್ರೀ ವೆಂಕಟ್ರಮಣ ದೇವರ ರಜತ ಛಾಯಾಚಿತ್ರ ನೀಡಿ ಗೌರವಿಸಿದರು. ತರಬೇತಿ ಕೇಂದ್ರದ ಅಧ್ಯಕ್ಷ ಕೆ.ಎನ್. ರಾಮಕೃಷ್ಣ ಹೊಳ್ಳ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ರಾಘವ ಬಲ್ಲಾಳ್ ಕಾರಡ್ಕ, ನಾಟ್ಯ ಗುರು ರಾಕೇಶ್ ರೈ ಅಡ್ಕ, ವೆಂಕಟ್ರಮಣಸ್ವಾಮಿ ಕೃಪಾಶ್ರಿತ ಕಲಾ ಸಂಘದ ಅಧ್ಯಕ್ಷ ಕೆ.ಎನ್. ವೆಂಕಟ್ರಮಣ ಹೊಳ್ಳ ಉಪಸ್ಥಿತರಿದ್ದರು.
ಈ ಸಂದರ್ಭ ಯಕ್ಷಗಾನದ ಪ್ರಖ್ಯಾತ ಕಲಾವಿದ ಕುಂಬ್ಳೆ ಶ್ರೀಧರ್ ರಾವ್ ಅವರಿಗೆ ಶ್ರದ್ಧಾಂಜಲಿ ಸಮರ್ಪಿಸಲಾಯಿತು. ರಾಮಕೃಷ್ಣ ಹೊಳ್ಳ ಸ್ವಾಗತಿಸಿ ಕಿಶೋರ್ ಕುಮಾರ್ ವಂದಿಸಿದರು.