ವಿವಾದಗಳು ಹಾಗೂ ಉದ್ವಿಗ್ನತೆಯನ್ನು ತಡೆಯುವ ಉದ್ದೇಶದಿಂದ ಈ ಸೂಚನೆ ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದಾರಾದರೂ, ಮುಸ್ಲಿಂ ವ್ಯಾಪಾರಿಗಳನ್ನು ಗುರಿಯಾಗಿಸಿಕೊಂಡು ಅವರು ಈ ಸೂಚನೆ ನೀಡಿದ್ದಾರೆ ಎಂದು ಹಲವರು ಭಾವಿಸಿದ್ದಾರೆ.
ಕಾಂವಡ್ ಯಾತ್ರೆಯ ಮಾರ್ಗದಲ್ಲಿ ಇರುವ ಹಲವು ಮಳಿಗೆಗಳು ಹಿಂದೂ ದೇವರ ಹೆಸರು ಹೊಂದಿದ್ದರೂ, ಅವುಗಳನ್ನು ನಿರ್ವಹಿಸುತ್ತಿರುವವರು ಮುಸ್ಲಿಮರು ಎಂದು ಬಿಜೆಪಿಯ ಶಾಸಕರಾದ ಕಪಿಲ್ ದೇವ್ ಅಗರ್ವಾಲ್ ಮತ್ತು ನಂದಕಿಶೋರ್ ಗುಜ್ಜರ್ ಅವರು ಈ ಹಿಂದೆ ದೂರಿದ್ದರು. ಇಂತಹ ಮಳಿಗೆಗಳನ್ನು ಮುಚ್ಚಬೇಕು ಅಥವಾ ಅವುಗಳ ಮಾಲೀಕರ ಹೆಸರನ್ನು ಮಳಿಗೆಗಳ ಮುಂದೆ ಉಲ್ಲೇಖಿಸುವಂತೆ ಸೂಚಿಸಬೇಕು ಎಂದು ಅವರು ಆಗ್ರಹಿಸಿದ್ದರು.
'ಸೂಚನೆಯು ಹೋಟೆಲ್‌ಗಳು, ಢಾಬಾಗಳು ಮತ್ತು ರಸ್ತೆಬದಿಯ ತಿಂಡಿ-ತಿನಿಸುಗಳ ಮಳಿಗೆಗಳಿಗೆ ಅನ್ವಯವಾಗುತ್ತದೆ' ಎಂದು ಮುಜಫ್ಫರ್‌ನಗರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇವುಗಳ ಮಾಲೀಕರ ನಿಜ ಗುರುತನ್ನು ಮರೆಮಾಚುವುದು ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯನ್ನು ಸೃಷ್ಟಿಸುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಯಾತ್ರಿಕರು ಈ ಮಾರ್ಗದಲ್ಲಿ ನಿಂತು ಊಟ, ತಿಂಡಿ ಸೇವಿಸುತ್ತಾರೆ.
ರಾಜಸ್ಥಾನ, ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶದ ಬೇರೆ ಬೇರೆ ಭಾಗಗಳಿಂದ ಬರುವ ಯಾತ್ರಿಕರು ಮುಜಫ್ಫರ್‌ನಗರದ ಮೂಲಕ ಸಾಗುತ್ತಾರೆ.
ಪೊಲೀಸರು ನೀಡಿರುವ ಸೂಚನೆಯ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು, ಈ ಬಗ್ಗೆ ನ್ಯಾಯಾಲಯಗಳು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲು ಮಾಡಿಕೊಂಡು, ಆಡಳಿತ ವ್ಯವಸ್ಥೆಗೆ ಸೂಕ್ತ ಆದೇಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.
'ತಿಂಡಿ-ತಿನಿಸುಗಳ ಮಳಿಗೆಗಳ ಹೆಸರು ಗುಡ್ಡು, ಮುನ್ನಾ, ಛೋಟು ಅಥವಾ ಫಟ್ಟೆ ಎಂದಿದ್ದರೆ ಏನಾಗುತ್ತದೆ? ಅವರ ಹೆಸರು ಏನನ್ನು ಸೂಚಿಸುತ್ತದೆ' ಎಂದು ಅಖಿಲೇಶ್ ಅವರು ಎಕ್ಸ್ ಮೂಲಕ ಪ್ರಶ್ನಿಸಿದ್ದಾರೆ.