HEALTH TIPS

ನೀಟ್- ಯುಜಿ | ನಾಳೆಯೊಳಗೆ ಫಲಿತಾಂಶ ಪ್ರಕಟಿಸಿ: ಎನ್‌ಟಿಎಗೆ ಸುಪ್ರೀಂ ಕೋರ್ಟ್

          ವದೆಹಲಿ: ಪ್ರಸಕ್ತ ಸಾಲಿನ 'ನೀಟ್‌-ಯುಜಿ'ಯ ಕೇಂದ್ರವಾರು ಮತ್ತು ನಗರವಾರು ಫಲಿತಾಂಶವನ್ನು ಇದೇ 20ರ ಮಧ್ಯಾಹ್ನ 12 ಗಂಟೆಯೊಳಗೆ ಪ್ರಕಟಿಸಬೇಕು ಎಂದು ಸುಪ್ರೀಂ ಕೋರ್ಟ್‌ ಗುರುವಾರ ರಾಷ್ಟ್ರೀಯ

           ಪರೀಕ್ಷಾ ಏಜೆನ್ಸಿಗೆ (ಎನ್‌ಟಿಎ) ನಿರ್ದೇಶಿಸಿದೆ. ಈ ವೇಳೆ ಪರೀಕ್ಷಾರ್ಥಿಗಳ ಗುರುತನ್ನು ಮರೆಮಾಚಿಸಬೇಕು ಎಂದೂ ಸೂಚಿಸಿದೆ.

          ಮೇ 5ರಂದು ನಡೆದ 'ನೀಟ್‌-ಯುಜಿ' ಪರೀಕ್ಷೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಅವ್ಯವಹಾರ
ಗಳು ನಡೆದಿವೆ ಎಂಬ ಆರೋಪಗಳು ವ್ಯಕ್ತವಾಗಿರುವ ಕಾರಣ ಇಡೀ ಪರೀಕ್ಷೆಯನ್ನು ರದ್ದುಗೊಳಿಸಬೇಕು, ಮರು ಪರೀಕ್ಷೆ ನಡೆಸಬೇಕು ಮತ್ತು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಎಂದು ಕೋರಿ ಸಲ್ಲಿಕೆಯಾಗಿರುವ 40ಕ್ಕೂ ಹೆಚ್ಚು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಡೆಸಿತು.

ದಿನವಿಡೀ ಈ ಕುರಿತು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌, ನ್ಯಾಯ
ಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ, ಮನೋಜ್‌ ಮಿಶ್ರಾ ಅವರ ಪೀಠವು, ಬೃಹತ್‌ ಜಾಲವಿಲ್ಲದೆ ಪ್ರಶ್ನೆಪತ್ರಿಕೆ ಸೋರಿಕೆ ಸಾಧ್ಯವಿಲ್ಲ ಎಂದು ಹೇಳಿತು. ಅರ್ಜಿಗಳ ವಿಚಾರಣೆಯನ್ನು ಇದೇ 22ಕ್ಕೆ ಮುಂದೂಡಿತು.

            ವಿಚಾರಣೆಯ ಆರಂಭದಲ್ಲಿ, 'ಇದು ಸಾಮಾಜಿಕವಾಗಿ ಪರಿಣಾಮಗಳನ್ನು ಹೊಂದಿರುವ ವಿಷಯವಾಗಿದ್ದು, ಲಕ್ಷಾಂತರ ಯುವ ವಿದ್ಯಾರ್ಥಿಗಳು ಇದಕ್ಕಾಗಿ ಕಾಯುತ್ತಿದ್ದಾರೆ. ಈ ಪ್ರಕರಣವನ್ನು ಆಲಿಸಿ, ನಿರ್ಧರಿಸೋಣ' ಎಂದು ಪೀಠ ಹೇಳಿತು.

ಪೀಠ ಹೇಳಿದ್ದೇನು?:

* ಪರೀಕ್ಷೆಯ ಸಂಪೂರ್ಣ ಪ್ರಕ್ರಿಯೆಯ ಪಾವಿತ್ರ್ಯಕ್ಕೆ ಧಕ್ಕೆಯಾಗಿದೆ ಎಂಬುದು ದೃಢಪಟ್ಟರೆ ಮಾತ್ರ ಮರು ಪರೀಕ್ಷೆಗೆ ಆದೇಶಿಸಬಹುದು

* ಪ್ರಶ್ನೆಪತ್ರಿಕೆ ಸೋರಿಕೆ ವ್ಯವಸ್ಥಿತವಾಗಿ ನಡೆದಿದೆಯೇ? ಇದರಿಂದ ಸಂಪೂರ್ಣ ಪರೀಕ್ಷೆಯ ಮೇಲೆ ಪರಿಣಾಮ ಬೀರಿದೆಯೇ? ಇಡೀ ಪರೀಕ್ಷೆಯ ಪಾವಿತ್ರ್ಯಕ್ಕೆ ಧಕ್ಕೆಯಾಗಿದೆಯೇ ಎಂಬುದು ಖಾತರಿಯಾಗಬೇಕು

* ಪರೀಕ್ಷಾ ನಿರ್ವಹಣೆಯಲ್ಲಿನ ಅಕ್ರಮಗಳ ಬಗ್ಗೆ ಸ್ಪಷ್ಟ ಮತ್ತು ನಿಖರವಾಗಿ ವಾದ ಮಂಡಿಸುವ ಮೂಲಕ ಪರೀಕ್ಷೆ ರದ್ದು ಮತ್ತು ಮರು ಪರೀಕ್ಷೆಗೆ ಸಂಬಂಧಿಸಿದಂತೆ ಹಕ್ಕುಗಳನ್ನು ಮಂಡಿಸಿ (ಅರ್ಜಿದಾರರ ಪರ ವಕೀಲರಿಗೆ ಸೂಚನೆ)

* ಮೇಲ್ನೋಟಕ್ಕೆ ಪ್ರಶ್ನೆಪತ್ರಿಕೆ ಸೋರಿಕೆ ಪಟ್ನಾ ಮತ್ತು ಹಜಾರಿಬಾಗ್‌ನಲ್ಲಿ ನಡೆದಿದೆ. ಇದು ಆ ಕೇಂದ್ರಗಳಿಗಷ್ಟೇ ಸೀಮಿತವಾಗಿದೆಯೋ ಅಥವಾ ವ್ಯಾಪಕವಾಗಿದೆಯೋ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿದೆ. ಇದಕ್ಕೂ ಗುಜರಾತ್‌ನ ಗೋಧ್ರಾದ ಪ್ರಕರಣಕ್ಕೂ ಸಂಬಂಧ ಕಾಣುತ್ತಿಲ್ಲ. ಗೋಧ್ರಾದಲ್ಲಿ ವ್ಯಕ್ತಿಯೊಬ್ಬರು ಕೆಲ ಅಭ್ಯರ್ಥಿಗಳ ಒಎಂಆರ್‌ ಶೀಟ್‌ಗಳನ್ನು ಭರ್ತಿ ಮಾಡಲು ಹಣ ಪಡೆದುಕೊಂಡಿರುವ ಆರೋಪಗಳಿವೆ

* ಯಾರೋ ಹಣಕ್ಕಾಗಿ ಈ ಕೆಲಸ ಮಾಡಿದಂತಿದೆಯೇ ಹೊರತು, ದೇಶಕ್ಕೆ ಮತ್ತು ಪರೀಕ್ಷೆಗೆ ಅಪಕೀರ್ತಿ ತರುವ ಉದ್ದೇಶ ಇದ್ದಂತಿಲ್ಲ. ದೊಡ್ಡ ಪ್ರಮಾಣದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಲು, ವಿವಿಧ ನಗರಗಳಲ್ಲಿ ದೊಡ್ಡ ಮಟ್ಟದಲ್ಲಿ ಸಂಪರ್ಕಗಳು ಬೇಕಾಗುತ್ತವೆ ಎಂಬುದು ನೆನಪಿನಲ್ಲಿಟ್ಟುಕೊಳ್ಳಿ

* ಸಿಬಿಐ ತನಿಖೆ ಮುಂದುವರಿದಿದ್ದು, ಅದು ಪೀಠಕ್ಕೆ ತಿಳಿಸಿರುವ ಮಾಹಿತಿ ಬಹಿರಂಗವಾದರೆ ತನಿಖೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಭಾಗಿಯಾಗಿರುವವರು ಜಾಗೃತರಾಗುತ್ತಾರೆ

ಕೌನ್ಸೆಲಿಂಗ್‌ ತಡೆಗೆ ನಕಾರ

           ವೈದ್ಯಕೀಯ ಕೋರ್ಸ್‌ಗಳ ಕೌನ್ಸೆಲಿಂಗ್‌ಗೆ ತಡೆ ನೀಡಬೇಕು ಎಂದು ಅರ್ಜಿದಾರರೊಬ್ಬರ ಪರ ವಾದಿಸಿದ ಹಿರಿಯ ವಕೀಲ ನರೇಂದ್ರ ಹೂಡಾ ಅವರ ಮನವಿಯನ್ನು ಪೀಠ ತಿರಸ್ಕರಿಸಿತು.

'ಈ ವಿಷಯವನ್ನು ಇದೇ 22ರಂದು ಗಮನಿಸುತ್ತೇವೆ. ಅದಾಗ್ಯೂ ಕೌನ್ಸೆ ಲಿಂಗ್‌ ಇದೇ 24 ಅಥವಾ ಮೂರನೇ ವಾರದಲ್ಲಿ ಆರಂಭವಾಗಲಿದ್ದು, ತಿಂಗಳು ಅಥವಾ ಅದಕ್ಕೂ ಹೆಚ್ಚು ಕಾಲ ಮುಂದುವರಿಯಲಿದೆ' ಎಂದು ಪೀಠ ಹೇಳಿತು.

ವಕೀಲರ ವಾದ- ಪ್ರತಿವಾದ:

         ಎನ್‌ಟಿಎ ಪೂರ್ಣ ಫಲಿತಾಂಶ ಪ್ರಕಟಿಸಿಲ್ಲ ಎಂದು ಅರ್ಜಿದಾರರ ಪರ ವಕೀಲ ನರೇಂದ್ರ ಹೂಡಾ ಪೀಠಕ್ಕೆ ತಿಳಿಸಿದರು. ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಎಲ್ಲ ಅಭ್ಯರ್ಥಿಗಳ ಫಲಿತಾಂಶವನ್ನು ಪ್ರಕಟಿಸುವಾಗ, ವೈದ್ಯಕೀಯ ಕೋರ್ಸ್‌ಗೆ ಪ್ರವೇಶ ಪಡೆಯುವ ಕನಿಷ್ಠ 1 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳ ಫಲಿತಾಂಶವನ್ನು ಎನ್‌ಟಿಎ ಘೋಷಿಸಬೇಕಲ್ಲವೇ ಎಂದು ಅವರು ಕೇಳಿದರು.

23 ಲಕ್ಷ ಅಭ್ಯರ್ಥಿಗಳ ಕಾರ್ಯಕ್ಷಮತೆಯನ್ನು ಆಧರಿಸಿ ಐಐಟಿ ಮದ್ರಾಸ್‌ ಸಿದ್ಧಪಡಿಸಿರುವ ತಾಂತ್ರಿಕ ವಿಶ್ಲೇಷಣೆ ವಿಶ್ವಾಸಾರ್ಹವಾಗಿಲ್ಲ. ವೈದ್ಯಕೀಯ ಕೋರ್ಸ್‌ಗೆ ಪ್ರವೇಶ ಪಡೆಯುವ 1.08 ಲಕ್ಷ ಅಭ್ಯರ್ಥಿಗಳನ್ನು ಆಧರಿಸಿ ಈ ವಿಶ್ಲೇಷಣೆ ಮಾಡಬೇಕಿತ್ತು ಎಂದು ಅವರು ಪ್ರತಿಪಾದಿಸಿದರು.

              ಐಐಟಿ ಮದ್ರಾಸ್‌ನ ನಿರ್ದೇಶಕರು ಎನ್‌ಟಿಎ ಆಡಳಿತ ಮಂಡಳಿ ಸದಸ್ಯರಾಗಿರುವ ಕಾರಣ, ಹಿತಾಸಕ್ತಿ ಸಂಘರ್ಷ ಎದುರಾಗುತ್ತದೆ. ಹೀಗಾಗಿ ಈ ವರದಿಯನ್ನು ಅವಲಂಬಿಸುವುದು ಸರಿಯಲ್ಲ ಎಂದರು.

           ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು, ಜೆಇಇ ಪರೀಕ್ಷೆಯನ್ನು ಆಯೋಜಿಸುವ ಐಐಟಿಯ ಅಧ್ಯಕ್ಷರು ಎನ್‌ಟಿಎ ಪದನಿಮಿತ್ತ ಸದಸ್ಯರಾಗಿರುತ್ತಾರೆ. ಆದರೆ ಈ ವರದಿಯನ್ನು ಸಿದ್ಧಪಡಿಸಿದ ನಿರ್ದೇಶಕರು ಸದಸ್ಯರಲ್ಲ ಎಂದು ಸ್ಪಷ್ಟಪಡಿಸಿದರು.

ಎನ್‌ಟಿಎ ವರದಿಯನ್ನು ಪರಿಶೀಲಿಸಿದ ಪೀಠ, ಹಲವು ರಾಜ್ಯಗಳ ಅಭ್ಯರ್ಥಿಗಳು ಅಗ್ರ ನೂರು ರ್‍ಯಾಂಕ್‌ಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಆಂದ್ರ ಪ್ರದೇಶ, ಬಿಹಾರ, ಗುಜರಾತಿನ ತಲಾ ಏಳು ಅಭ್ಯರ್ಥಿಗಳು, ಕರ್ನಾಟಕ, ಉತ್ತರ ಪ್ರದೇಶದ ತಲಾ ಆರು, ಕೇರಳ, ಮಹಾರಾಷ್ಟ್ರ, ತಮಿಳುನಾಡು ಪಶ್ಚಿಮ ಬಂಗಾಳದ ತಲಾ ಐವರು, ಹರಿಯಾಣದ ನಾಲ್ವರು ಮತ್ತು ದೆಹಲಿಯ ಮೂವರು ಅಭ್ಯರ್ಥಿಗಳಿದ್ದಾರೆ ಎಂದು ಹೇಳಿತು.

         ಮೊದಲ 100 ರ್‍ಯಾಂಕ್‌ಗಳನ್ನು ಪಡೆದುಕೊಂಡಿರುವವರು 18 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ 56 ನಗರಗಳಲ್ಲಿನ 95 ಕೇಂದ್ರಗಳಲ್ಲಿ ಪರೀಕ್ಷೆ ಬರೆದವರಾಗಿದ್ದಾರೆ ಎಂದು ಮೆಹ್ತಾ ತಿಳಿಸಿದರು.

ಏನಿದು ಪ್ರಕರಣ?

                 ಮೇ 5ರಂದು, ದೇಶದ 571 ನಗರಗಳು ಸೇರಿದಂತೆ ವಿದೇಶಗಳಲ್ಲಿನ 14 ಕಡೆಗಳಲ್ಲಿನ 4,750 ಕೇಂದ್ರಗಳಲ್ಲಿ ನೀಟ್‌-ಯುಜಿ ಪರೀಕ್ಷೆ ನಡೆದಿತ್ತು. ಸುಮಾರು 23.33 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ದೇಶದಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಕೆಲ ಅಭ್ಯರ್ಥಿಗಳು ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries