ನವದೆಹಲಿ: ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಇದು ಸಾಮಾಜಿಕ ಸಮಸ್ಯೆ ಎಂದು ಗುರುವಾರ ಹೇಳಿದೆ.
ಆತ್ಮಹತ್ಯೆಗಳನ್ನು ತಡೆಯುವುದಕ್ಕಾಗಿ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕೈಗೊಂಡ ಕ್ರಮಗಳ ಕುರಿತು ಸಮಗ್ರ ವರದಿ ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ ನಾಲ್ಕು ವಾರಗಳ ಅವಕಾಶ ಕಲ್ಪಿಸಿದೆ.
ಈ ಸಂಬಂಧ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ (ಪಿಐಎಲ್) ವಿಚಾರಣೆಯನ್ನು ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠ ನಡೆಸಿತು.
'ಇದೊಂದು ಸಾಮಾಜಿಕ ಸಮಸ್ಯೆ. ಈ ಕುರಿತು ಕೇಂದ್ರ ಸರ್ಕಾರ ಮತ್ತು ಸಂಬಂಧಿಸಿದ ಪ್ರಾಧಿಕಾರಗಳು ಪ್ರಮಾಣಪತ್ರ ಸಲ್ಲಿಸಬೇಕು' ಎಂದು ಮುಖ್ಯನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು.
ಈ ಸಂಬಂಧ, ವಕೀಲ ಗೌರವಕುಮಾರ್ ಬನ್ಸಲ್ ಎಂಬುವವರು ಪಿಐಎಲ್ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಕೇಂದ್ರ, ಎಲ್ಲ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 2019ರ ಆಗಸ್ಟ್ 2ರಂದು ನೋಟಿಸ್ ಜಾರಿ ಮಾಡಿತ್ತು.
ಅರ್ಜಿದಾರರ ವಾದವೇನು?: ಆತ್ಮಹತ್ಯೆಯ ಆಲೋಚನೆ ಹೊಂದಿದ ವ್ಯಕ್ತಿಗಳಿಗೆ ನೆರವು ನೀಡಲು ಹಾಗೂ ಆಪ್ತ ಸಮಾಲೋಚನೆ ನಡೆಸುವುದಕ್ಕಾಗಿ 'ಕಾಲ್ ಸೆಂಟರ್'ಗಳನ್ನು ಸ್ಥಾಪಿಸುವಂತೆ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡುವಂತೆ ಅರ್ಜಿದಾರರು ಕೋರಿದ್ದಾರೆ.
ದೆಹಲಿ ಪೊಲೀಸ್ ದಾಖಲೆಗಳ ಪ್ರಕಾರ, 2014ರಿಂದ 2018ರ ನಡುವೆ, 18 ವರ್ಷಕ್ಕಿಂತ ಕಡಿಮೆ ವಯೋಮಾನದ 140 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಅಂಶವನ್ನು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಆತ್ಮಹತ್ಯೆಗಳನ್ನು ತಡೆಗಟ್ಟುವುದಕ್ಕಾಗಿ ಪರಿಣಾಮಕಾರಿ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮ ರೂಪಿಸಿ, ಅನುಷ್ಠಾನಗೊಳಿಸುವಲ್ಲಿ ಸಂಬಂಧಪಟ್ಟ ಪ್ರಾಧಿಕಾರಗಳು ವಿಫಲವಾಗಿವೆ. ಇದು ಮಾನಸಿಕ ಆರೋಗ್ಯ ಕಾಯ್ದೆ,2017ರ ಸೆಕ್ಷನ್ 29 ಹಾಗೂ 115ರ ಉಲ್ಲಂಘನೆ ಮಾತ್ರವಲ್ಲ, ಸಂವಿಧಾನದ 21ನೇ ವಿಧಿಯ (ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆ) ಉಲ್ಲಂಘನೆಯೂ ಆಗಿದೆ ಎಂದು ಅರ್ಜಿಯಲ್ಲಿ ವಿವರಿಸಿದ್ದಾರೆ.