ನವದೆಹಲಿ: 'ಅಗ್ನಿವೀರ' ಹುತಾತ್ಮರಿಗೆ ನೀಡುವ ಪರಿಹಾರದ ಕುರಿತ ಗದ್ದಲದ ಬೆನ್ನಲ್ಲೇ, 'ಅಗ್ನಿಪಥ' ಯೋಜನೆ ಕುರಿತು ಶ್ವೇತಪತ್ರ ಹೊರಡಿಸುವಂತೆ ಕಾಂಗ್ರೆಸ್ ಗುರುವಾರ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.
ನವದೆಹಲಿ: 'ಅಗ್ನಿವೀರ' ಹುತಾತ್ಮರಿಗೆ ನೀಡುವ ಪರಿಹಾರದ ಕುರಿತ ಗದ್ದಲದ ಬೆನ್ನಲ್ಲೇ, 'ಅಗ್ನಿಪಥ' ಯೋಜನೆ ಕುರಿತು ಶ್ವೇತಪತ್ರ ಹೊರಡಿಸುವಂತೆ ಕಾಂಗ್ರೆಸ್ ಗುರುವಾರ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.
ಎಐಸಿಸಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ನ ಮಾಜಿ ಸೈನಿಕರ ವಿಭಾಗದ ಮುಖ್ಯಸ್ಥ ಕರ್ನಲ್ (ನಿವೃತ್ತ) ರೋಹಿತ್ ಚೌಧರಿ, 'ಪಂಜಾಬಿನ ಲುಧಿಯಾನದ ದಿವಂಗತ 'ಅಗ್ನಿವೀರ' ಅಜಯ್ ಸಿಂಗ್ ಅವರ ಕುಟುಂಬಕ್ಕೆ ಕೇಂದ್ರ ಸರ್ಕಾರವು ₹48 ಲಕ್ಷ ನೀಡಿರುವುದಾಗಿ ಹೇಳಿದೆ.
ಹುತಾತ್ಮರಾದ ಅಗ್ನಿವೀರರ ಕುಟುಂಬಗಳಿಗೆ ಪರಿಹಾರ ನೀಡುವ ವಿಚಾರದಲ್ಲಿ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಸಂಸತ್ತಿನಲ್ಲಿ ಸುಳ್ಳು ಹೇಳಿದ್ದಾರೆ. ಅದಕ್ಕಾಗಿ ಅವರು ಕ್ಷಮೆಯಾಚಿಸಬೇಕು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ ಒಂದು ದಿನದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.
ಹುತಾತ್ಮರ ಕುಟುಂಬಗಳಿಗೆ ₹1 ಕೋಟಿ ಪರಿಹಾರ ನೀಡಲಾಗಿದೆ ಎಂದು ರಾಜನಾಥ ಸಿಂಗ್ ಹೇಳಿದ್ದರು. ಆದರೆ ಅಜಯ್ ಸಿಂಗ್ ಅವರ ಕುಟುಂಬಕ್ಕೆ ಅಂತಹ ಯಾವುದೇ ನೆರವು ಸಿಕ್ಕಿಲ್ಲ ಎಂದು ಅವರ ತಂದೆ ವಿಡಿಯೊದಲ್ಲಿ ಹೇಳಿರುವುದನ್ನು ರಾಹುಲ್ ಗಾಂಧಿ 'ಎಕ್ಸ್'ನಲ್ಲಿ ಹಂಚಿಕೊಂಡಿದ್ದರು.