ಬದಿಯಡ್ಕ: ಶನಿವಾರ ತಗ್ಗಿದ್ದ ಮಳೆ ಭಾನುವಾರ ಮತ್ತೆ ಬಿರುಸು ಪಡೆದುಕೊಳ್ಳಲಾರಂಭಿಸಿದೆ. ಬಿರುಸಿನ ಗಾಳಿಯೊಂದಿಗೆ ಭಾರೀ ಮಳೆಯಾಗಿದ್ದು, ವಿವಿಧೆಡೆ ಹಾನಿ ಸಂಭವಿಸಿದೆ. ಬಿರುಸಿನ ಗಾಳಿಗೆ ಕುಂಬ್ಡಾಜೆ ಪಂಚಾಯಿತಿಯ ಬೆಳಿಂಜ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ಟಿನ್‍ಶೀಟ್ ಹಾಗೂ ಹೆಂಚು ಹಾಸಿನ ಮಹಡಿ ಕುಸಿದಿದೆ. ಶಾಲೆಗೆ ರಜೆಯಾಗಿದ್ದ ಹಿನ್ನೆಲೆಯಲ್ಲಿ ಸಂಭಾವ್ಯ ದುರಂತ ತಪ್ಪಿತ್ತು.
ಜಿಲ್ಲಾಧಿಕಾರಿ ಭೇಟಿ: ಇಂದು ರಜೆ
ಭಾನುವಾರ ಬೆಳಗ್ಗೆ ಬೀಸಿದ ಗಾಳಿಯಿಂದ ಹಾನಿಗೀಡಾದ ಕುಂಬ್ಡಾಜೆ ಪಂಚಾಯಿತಿ ಬೆಳಿಂಜ ಎಎಲ್‍ಪಿ ಶಾಲೆಗೆ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿದರು. ಹೆಂಚುಹಾಸಿನ ಕಟ್ಟಡದ ಮೇಲ್ಛಾವಣಿ ಮತ್ತು ಶೀಟ್ ಅಳವಡಿಸಿದ ಒಂದು ಪಾಶ್ರ್ವ ಕುಸಿದಿದೆ. ಜು. 22ರಂದು ಬೆಳಿಂಜ್ ಎಎಲ್‍ಪಿ ಶಾಲೆಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ, ದುರಸ್ತಿಕಾರ್ಯಗಳನ್ನು ಒಂದುವಾರದೊಳಗೆ ಪೂರ್ತಿಗೊಳಿಸಲು ಹಾಗೂ ಈ ಕಾಲಾವಧಿಯಲ್ಲಿ ತರಗತಿ ನಷ್ಟಗೊಳ್ಳದಂತೆ ಶಾಲೆ ನಡೆಸಲು ಅನುಕೂಲವಾಗುವಂತೆ ಶಾಲಾ ರಕ್ಷಕ ಶಿಕ್ಷಕ ಸಂಘದ ಸಭೆಯನ್ನು ಜು. 22ರಂದು ನಡೆಸಿ ತೀರ್ಮಾನ ಕೈಗೊಳ್ಳುವಂತೆಯೂ ಸೂಚಿಸಿದರು. ಲೋಕೋಪಯೋಗಿ ಇಲಾಖೆ ಕಟ್ಟಡ ವಿಭಾಗ ಸಹಾಯಕ ಇಂಜಿನಿಯರ್ ಇ ಶ್ರೀನಿತ್ ಕುಮಾರ್ ಅವರು ದುರಸ್ತಿ ಕಾರ್ಯ ಶೀಘ್ರ ನಡೆಸಿಕೊಡುವ ಬಗ್ಗೆ ಮಾಹಿತಿ ನೀಡಿದರು.
ಕುಂಬ್ಡಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಮೀದ್ ಪೆÇಸೊಳಿಗೆ, ಕುಂಬ್ಡಾಜೆ ಗ್ರೂಪ್ ಗ್ರಾಮಾಧಿಕಾರಿ ಎಸ್. ಲೀಲಾ, ಕುಂಬಲೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಶಶಿಧರ, ಶಾಲೆಯ ಮುಖ್ಯ ಶಿಕ್ಷಕ ಕೆ.ರವೀಂದ್ರನ್ ಉಪಸ್ಥಿತರಿದ್ದರು.