ನವದೆಹಲಿ: ಸಂಸತ್ನ ಬಜೆಟ್ ಅಧಿವೇಶನದ ಆರಂಭ(ಜು.22)ದ ದಿನವೇ 'ನೀಟ್' ಪ್ರಶ್ನೆಪತ್ರಿಕೆ ಸೋರಿಕೆ ವಿಚಾರವಾಗಿ ಪ್ರತಿಪಕ್ಷಗಳು ಆಡಳಿತಾರೂಢ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡವು. ಪೇಪರ್ ಸೋರಿಕೆ ಗಂಭೀರ ವಿಷಯಯವಾಗಿದ್ದು, ಇದಕ್ಕೆ ಶಿಕ್ಷಣ ಸಚಿವರೇ ನೇರ ಹೊಣೆಯಾಗಬೇಕು ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದರು.
ಇದಕ್ಕೆ ಉತ್ತರಿಸಿದ ಸಚಿವ ಧರ್ಮೇಂದ್ರ ಪ್ರಧಾನ್, ಸರ್ಕಾರದ ವಿರುದ್ಧದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ತಿರುಗೇಟು ನೀಡಿದರು.
ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ, 'ನೀಟ್' ಪರೀಕ್ಷೆಯ ಪತ್ರಿಕೆ ಸೋರಿಕೆಯ ವಿಷಯವನ್ನು ರಾಹುಲ್ ಪ್ರಸ್ತಾಪಿಸಿದರು. ನೀಟ್ ವಿಚಾರದಲ್ಲಿ ಮಾತ್ರವಲ್ಲದೆ ನಮ್ಮ ಪರೀಕ್ಷಾ ವ್ಯವಸ್ಥೆಯಲ್ಲಿ ಬಹಳ ಗಂಭೀರವಾದ ಲೋಪವಿದೆ. ಪ್ರಶ್ನೆ ಪತ್ರಿಕೆಗಳ ಸೋರಿಕೆಯಿಂದ ವಿದ್ಯಾರ್ಥಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದು, ಇಡೀ ದೇಶದಲ್ಲಿ ಪರೀಕ್ಷಾ ಪ್ರಕ್ರಿಯೆಯೇ 'ವಂಚನೆ'ಯಾಗಿ ಪರಿಣಮಿಸಿದೆ ಎಂದರು.
ಶಿಕ್ಷಣ ವ್ಯವಸ್ಥೆಯನ್ನು ಹಣದಿಂದ ಖರೀದಿಸುತ್ತಿದೆ ಎಂದು ಕೋಟ್ಯಂತರ ಜನರು ನಂಬಿದ್ದು, ಇದು ವಿರೋಧ ಪಕ್ಷದ ಅಭಿಪ್ರಾಯವೂ ಆಗಿದೆ ಎಂದು ಸ್ಪಷ್ಟಪಡಿಸಿದರು.
ಸಮಾಜವಾದಿ ಪಕ್ಷದ ಸಂಸದ ಅಖಿಲೇಶ್ ಯಾದವ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಸರ್ಕಾರ ದಾಖಲೆ ಸೃಷ್ಟಿಸಿದೆ. ಕೆಲವು ಕೇಂದ್ರಗಳಲ್ಲಿ 2000ಕ್ಕೂ ಹೆಚ್ಚು ಮಂದಿ ಪಾಸಾಗಿದ್ದು, ಶಿಕ್ಷಣ ಸಚಿವರಾಗಿ ಧರ್ಮೇಂದ್ರ ಪ್ರಧಾನ್ ಇರುವವರೆಗೂ ವಿದ್ಯಾರ್ಥಿಗಳಿಗೆ ನ್ಯಾಯ ಸಿಗುವುದಿಲ್ಲ ಎಂದು ಹೇಳಿದರು.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬಗ್ಗೆ ಪ್ರತಿಪಕ್ಷಗಳ ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಧರ್ಮೇಂದ್ರ ಪ್ರಧಾನ್, ಸರ್ಕಾರ ಏನನ್ನೂ ಮುಚ್ಚಿಡುತ್ತಿಲ್ಲ ಮತ್ತು ಸತ್ಯವನ್ನು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದು, ಪ್ರಕರಣವು ಪ್ರಸ್ತುತ ಸುಪ್ರೀಂ ಕೋರ್ಟ್‌ನ ವಿಚಾರಣೆಯಲ್ಲಿದೆ. ನ್ಯಾಯಾಲಯದ ಆದೇಶದವರೆಗೆ ಕಾಯುತ್ತೇವೆ ಎಂದರು.