ಮಥುರಾ: ಅಯೋಧ್ಯೆ ರಾಮಲಲ್ಲಾ ಮೂರ್ತಿ, ಸ್ವಾಮಿ ವಿವೇಕಾನಂದರ ಪುತ್ಥಳಿ ಕೆತ್ತಿದ್ದ ಶಿಲ್ಪಿ ಅರುಣ್ ಯೋಗಿರಾಜ್ ಸೇರಿದಂತೆ ನಾಡಿನ ಆರು ಮಂದಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.
ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸೋಮವಾರ ಕನ್ಹಾ ನಗರ ಮಥುರಾ ತಲುಪಿದ್ದು, ಸಂಸ್ಕೃತಿ ವಿಶ್ವವಿದ್ಯಾಲಯದ ಐದನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅರುಣ್ ಯೋಗಿರಾಜ್ ಸೇರಿದಂತೆ ನಾಡಿನ ಆರು ಮಂದಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ ರಾಮನಾಥ್ ಕೋವಿಂದ್ ಅವರು, ಕಷ್ಟ ಬಂದಾಗ ಛಲ ಬಿಡದೆ ಗುರಿ ಮುಟ್ಟಲು ಶ್ರಮಿಸಬೇಕು ಎಂದರು. ನಾವು ಆಯ್ದುಕೊಂಡ ಹಾದಿಯಲ್ಲಿ ಮುಂದೆ ಸಾಗಿದರೆ, ನಾವು ನಮ್ಮ ಗಮ್ಯಸ್ಥಾನವನ್ನು ಖಂಡಿತವಾಗಿ ತಲುಪುತ್ತೇವೆ. ಪ್ರಸ್ತುತ ಯುಗದಲ್ಲಿ ವಿದ್ಯಾರ್ಥಿನಿಯರು ಹುಡುಗರನ್ನು ಮೀರಿಸುತ್ತಿದ್ದಾರೆ, ಇದು ಮಹಿಳಾ ಶಿಕ್ಷಣ ಮತ್ತು ಸಬಲೀಕರಣದ ಅಭಿಯಾನಕ್ಕೆ ಶಕ್ತಿ ನೀಡುತ್ತಿದೆ ಎಂದು ಅವರು ಹೇಳಿದರು.
ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಮೆರಿಕದ ವರದಿಯನ್ನು ಉಲ್ಲೇಖಿಸಿ, ಈ ವರದಿಯ ಪ್ರಕಾರ, ಭಾರತದ ಜನರ ಆರೋಗ್ಯದಲ್ಲಿ ದೊಡ್ಡ ಕುಸಿತವಾಗಿದೆ. ಅಧ್ಯಯನದ ಜೊತೆಗೆ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ ಎಂದರು. ಆರೋಗ್ಯಕರ ದೇಹ ಮತ್ತು ಉತ್ತಮ ಶಿಕ್ಷಣ ಆರೋಗ್ಯಕರ ಸಮಾಜಕ್ಕೆ ಅತ್ಯಗತ್ಯ. ಆರೋಗ್ಯವಾಗಿರಲು ಮತ್ತು ರೋಗಗಳಿಂದ ದೂರವಿರಲು ಯೋಗ ಮಾಡಿ ಎಂದರು.
ಇದೇ ವೇಳೆ ಸಂಸ್ಕೃತಿ ವಿಶ್ವವಿದ್ಯಾನಿಲಯದ ಕುಲಪತಿ ಸಚಿನ್ ಗುಪ್ತಾ ಮಾತನಾಡಿ, ಮಾಜಿ ರಾಷ್ಟ್ರಪತಿಗಳು ಆವರಣದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಅನಾವರಣಗೊಳಿಸಿದ್ದು, ಇದು ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕವಾಗಿದೆ. ಶಿಲ್ಪಿ ಅರುಣ್ ಯೋಗಿರಾಜ್ ಸೇರಿದಂತೆ ಆರು ಮಂದಿಗೆ ಗೌರವ ಪದವಿ ನೀಡಲಾಗಿದೆ ಎಂದು ತಿಳಿಸಿದರು.