ಮುಳ್ಳೇರಿಯ: ಲಿಪಿಡ್ ನಾನೋ ಪಾರ್ಟಿಕಲ್‍ಗಳ ಮುಖಾಂತರ ಶರೀರದಲ್ಲಿ ನ್ಯೂಕ್ಲಿಕ್ ಆಮ್ಲಗಳ (ಎಮ್ ಆರ್ ಎನ್ ಎ) ಡೆಲಿವರಿ ಎಂಬ ನೂತನ ವೈಜ್ಞಾನಿಕ ವಿಭಾಗದಲ್ಲಿ ನಡೆಸಿದ ಪ್ರಧಾನ ಸಂಶೋಧನೆಗೆ ಅಮೆರಿಕನ್ ಪೇಟೆಂಟ್ ಲಭಿಸಿದೆ. ಕಾಸರಗೋಡಿನ ಮುಳ್ಳೇರಿಯ ನಿವಾಸಿಯಾದ, ಪ್ರಸ್ತುತ ಕಣ್ಣೂರಿನ ತಳಿಪರಂಬ ಸರ್ ಸೈಯದ್ ಕಾಲೇಜಿನ ರಸಾಯನ ಶಾಸ್ತ್ರ ಪ್ರಾಧ್ಯಾಪಕರಾದ ಡಾ. ಅಶ್ವನೀ ಕುಮಾರ್ ಅವರು ಅಮೆರಿಕದ ಒರೆಗೊನ್ ಸ್ಟೇಟ್ ವಿಶ್ವವಿದ್ಯಾನಿಲಯದಲ್ಲಿ, ಪ್ರೊ. ಗೌರವ್ ಸಹಾಯ್ ಅವರ ಮಾರ್ಗ ನಿರ್ದೇಶನದಲ್ಲಿ, 2016-18 ರ ಪೋಸ್ಟ್ ಡಾಕ್ಟರ್ ಫೆಲೋಶಿಪ್ ನ ಭಾಗವಾಗಿ ನಡೆಸಿದ ಸಂಶೋಧನೆಗೆ ಈ ಅಂಗೀಕಾರ ಪಾತ್ರವಾಯಿತು. ಪೇಟೆಂಟಿಗಾಗಿ 2018 ರಲ್ಲಿ ಅರ್ಜಿ ಸಲ್ಲಿಸಿದರೂ ಕಾನೂನು ಪ್ರಕ್ರಿಯೆಗಳು ಪೂರ್ಣಗೊಳಿಸಿ 2024ರಲ್ಲಿ ಪೇಟೆಂಟ್ ಅನುಮತಿಸಲಾಯಿತು. 2039ರ ವರೆಗೆ ಪೇಟೆಂಟ್ ಕಾಲಾವಧಿ ಲಭ್ಯವಾಗಿದೆ.ಇವರು ಖ್ಯಾತ ಯಕ್ಷಗಾನ ಕಲಾವಿದ, ಕನ್ನಡ-ಸಂಸ್ಕøತ ಪ್ರವಚನಕಾರ ಬೆಳ್ಳಿಗೆ ನಾರಾಯಣ ಮಣಿಯಾಣಿ ಹಾಗೂ ನಿವೃತ್ತ ಬ್ಯಾಂಕ್ ಉದ್ಯೋಗಿ ಪುಷ್ಪಲತ ದಂಪತಿಗಳ ಪುತ್ರರಾಗಿದ್ದಾರೆ.
ಸಂಶೋಧನೆಯ ವಿವರಣೆ:
ಕೋವಿಡ್ ಯುಗದಲ್ಲಿ ಎಂ ಆರ್ ಎನ್ ಎ ಲಸಿಕೆಗಳ ಮಹತ್ವ ಜಗತ್ತಿಗೆ ವ್ಯಕ್ತವಾಯಿತು. ದೇಹದಲ್ಲಿ ನಿರ್ದಿಷ್ಟ ಜೀವ ಕೋಶಗಳಿಗೆ ನಿರ್ದಿಷ್ಟ ಪ್ರಮಾಣದಲ್ಲಿ ಎಂ ಆರ್ ಎನ್ ಎ ಗಳನ್ನು ತಲುಪಿಸುವುದು ಅತ್ಯಂತ ಪ್ರಾಧಾನ್ಯ ಹಾಗೂ ಪ್ರಯಾಸಕರ ವಿಷಯವಾಗಿದೆ. ಲಿಪಿಡ್ ನಾನೊ ಪಾರ್ಟಿಕಲ್ ಗಳನ್ನು ಬಳಸುವುದು ಈ ಸವಾಲಿಗಿರುವ ಪ್ರಧಾನ ಪರಿಹಾರ. ಇಂತಹ ನ್ಯಾನೋ ಪಾರ್ಟಿಕಲ್ ಗಳ ಉತ್ಪಾದನೆಗೆ ಉಪಯೋಗಿಸುವ ನಾಲ್ಕು ತರಹದ ಲಿಪಿಡ್ ಗಳಲ್ಲಿ ಕೊಲೆಸ್ಟೆರೋಲ್ ಒಂದು ಘಟಕ. ಈ ಕೊಲೆಸ್ಟೆರೋಲನ್ನು ಬದಲಾಯಿಸಲು ಸಸ್ಯಜನ್ಯ ಸ್ಟೇರೋಲ್ ಹಾಗೂ ವಿಟಮಿನ್ ಡಿ ಅನಲೋಗಗಳನ್ನು ಬಳಸಿ ನಿರ್ಮಿಸಿದ ಮೋಲಿಕ್ಯುಲರ್ ಲೈಬ್ರರಿಯ ಮುಖಾಂತರ ನಡೆಸಿದ ಸಂಶೋಧನೆಯು ಪೇಟೆಂಟಿಗೆ ಆಧಾರವಾಯಿತು. ಬಾದಾಮಿ, ಅವಾಕ್ಯಾಡೋ ಹಾಗೂ ಇನ್ನಿತರ ಹಣ್ಣು ಹಂಪಲುಗಳಲ್ಲಿ ಧಾರಾಳವಾಗಿರುವ ಬೀಟಾ ಸೈಟೊ ಸ್ಟೇರೋಲ್ ಉಪಯೋಗಿಸಿ ನಿರ್ಮಿಸಿದ ಲಿಪಿಡ್ ನಾನೋ ಪಾರ್ಟಿಕಲ್ ಗಳು ಅತ್ಯುತ್ತಮ ರೀತಿಯಲ್ಲಿ ಕೋಶಗಳಿಗೆ ಎಂ ಆರ್ ಎನ್ ಎ ಡೆಲಿವರಿ ನಿರ್ವಹಿಸಿದಾಗಿ ಕಂಡು ಹಿಡಿಯಲಾಯಿತು. ಇದರಂತೆಯೇ ಸ್ಟಿಗ್ಮ ಸ್ಟೇರೋಲ್ ಕೂಡ ಉತ್ತಮ ಫಲವನ್ನು ನೀಡಿತು. ಇವುಗಳ ಸ್ಟ್ರಕ್ಚರ್ -ಆಕ್ಟಿವಿಟಿ ಬಂಧವನ್ನು ಕೂಡ ಸಂಶೋಧನೆಯಲ್ಲಿ ವಿವರಿಸಲಾಯಿತು.
ಡಾ ಅಶ್ವನಿ ಕುಮಾರ್ ಅಂಗವಾಗಿರುವ ಸಂಶೋಧನ ತಂಡವು ನಿರ್ಮಿಸಿದ ನವೀನ ಲಿಪಿಡ್ ನ್ಯಾನೋ ಪಾರ್ಟಿಕಲ್ ಫಾರ್ಮುಲೇಷನ್ ತಂತ್ರಜ್ಞಾನದ ಪರವಾನಗಿಯನ್ನು ಇಂದಿನ ಎಂ ಆರ್ ಎನ್ ಎ ಲಸಿಕೆಗಳ ಪ್ರಧಾನ ಉತ್ಪಾದಕರಾದ ಅಮೆರಿಕದ ಬಾಸ್ಟನ್ನಲ್ಲಿರುವ "ಮೋಡರ್ನ ಥೇರಾಪುಟಿಕ್ಸ್" ಎಂಬ ಕಂಪನಿಯು ಪಡೆದಿದೆ. ಈ ಸಂಶೋಧನಾ ಪ್ರಬಂಧವು ಪ್ರಶಸ್ತವಾದ "ನೇಚರ್ ಕಮ್ಯುನಿಕೇಶನ್" ಎಂಬ ಪಾಶ್ಚಾತ್ಯ ವೈಜ್ಞಾನಿಕ ಜರ್ನಲ್ ನಲ್ಲಿ 2020ರಲ್ಲಿ ಪ್ರಕಟಣೆಯಾಗಿದೆ.